ತುಮಕೂರು: ನಾನು ಎಲ್.ಕೆ.ಜಿ. ಮಾಡಿದ್ದರೂ ಶಿಕಾರಿಪುರ ತಾಲೂಕಿನ ಜನ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಿಮಗೆ ಒಂದು ಚುನಾವಣೆ ಗೆಲ್ಲೋದಕ್ಕೂ ಸಾಧ್ಯವಾಗಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ್ ಅವರೇ ತಮ್ಮ ಕಾರ್ಯಕರ್ತರಿಗೆ ಸೂಚಿಸಿ ಬ್ಯಾನರ್ ಹರಿದು ಹಾಕಿಸಿಕೊಂಡು ಈಗ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದುವರೆಗೆ ಯಾವುದೇ ಚುನಾವಣೆ ಗೆದ್ದಿಲ್ಲ. ಹಿಂಬಾಗಿಲಿನಿಂದ ಶಾಸನಸಭೆ ಪ್ರವೇಶ ಪಡೆಯುವ ನಾಯಕ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ವಿರುದ್ಧ ಸ್ಪರ್ಧಿಸುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದೇನೆ. ಪುಕ್ಕಟ್ಟೆ ಮಾತನಾಡುವುದು ಬೇಡ. ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ. ಬನ್ನಿ ನೀವೇ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಹೇಳಿದ್ದೇನೆ. ಬಿ.ಕೆ. ಹರಿಪ್ರಸಾದ್ ನಾಲ್ಕು ಬಾರಿ ರಾಜ್ಯಸಭಾ ಸದಸ್ಯ ಆಗಿರಬಹುದು. ಆದರೆ ಯಾವುದೇ ಚುನಾವಣೆಯಲ್ಲಿ ಹರಿಪ್ರಸಾದ್ ಗೆಲುವು ಸಾಧಿಸಿಲ್ಲ. ಎಂಎಲ್ಎ, ಎಂಪಿ ಬಿಡಿ, ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಮುಂದೆ ಜಿಲ್ಲಾ ಪಂಚಾಯಿತಿ ಚುನಾವಣೆ ಬರುತ್ತಿದೆ. ಅದರಲ್ಲಾದರೂ ಸ್ಪರ್ಧಿಸಲಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೇ ವಿಜಯೇಂದ್ರ ಇನ್ನೂ ಎಲ್‌ಕೆಜಿ, ನಾನು ಪಿಎಚ್ಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಎಲ್‌ಕೆಜಿ ಮಾಡಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಹರಿಪ್ರಸಾದ್ ಪಿಎಚ್ಡಿ ಮಾಡಿದರು ಒಂದು ಚುನಾವಣೆ ಗೆಲ್ಲಲು ಸಾಧ್ಯವಾಗಿಲ್ಲ. ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಅವರಿಗೆ ಕಿವಿಮಾತು ಹೇಳುತ್ತೇನೆ ಎಂದರು.
ಮುಖ್ಯಮಂತ್ರಿ ಎಂದು ಹೇಳಬೇಡಿ ಪ್ರಜಾಸೇವಕ ಎನ್ನುವಂತೆ ಕರೆಯಲು ಸಿಎಂ ಹೇಳಿದ್ದಾರೆ. ಗೌರವಾನ್ವಿತ ಪ್ರಜಾಸೇವಕರಿಗೆ ಪ್ರಜಾಸೇವೆ ಮಾಡಲು ಪುರುಸೊತ್ತು ಇಲ್ಲ. ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕಾರಿಪುರದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿ, ನಾವು 10 ದಿನ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದ್ದೆವು. ಪಾದಯಾತ್ರೆಯ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ನಮ್ಮ ಪಾದಯಾತ್ರೆಯಿಂದ ಎಚ್ಚೆತ್ತುಕೊಂಡಿರುವ ಕೆಪಿಸಿಸಿ ಅಧ್ಯಕ್ಷರು ಶಿಕಾರಿಪುರದಲ್ಲಿ ಭಾರತ್ ಜೋಡೋ ಯಾತ್ರೆಗೆ ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ. ಕಾಂಗ್ರೆಸ್ ಬಾವುಟ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಈ ರೀತಿಯಾಗಿ ಹೇಳಿ ಪುಕ್ಕಟ್ಟೆ ಪ್ರಚಾರಗಿಟ್ಟಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಹರಿಪ್ರಸಾದ್ ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಬಹಳ ಹಿರಿಯರಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಡಿಕೆಶಿ ಸರ್ಕಾರದ 100 ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ಕಾರ್ಯಕ್ರಮದ ವೇದಿಕೆಗೂ ಆಹ್ವಾನಿಸಲಿಲ್ಲ. ಶಿಕಾರಿಪುರ ಬಿಜೆಪಿ ಭದ್ರಕೋಟೆಯಾಗಿದ್ದು, ಯಾರೂ ಅಲ್ಲಾಡಿಸಲು ಆಗುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

