HomeIndia15 ವರ್ಷ ರಾಖಿ ಕಟ್ಟಿದ್ದ ಯುವಕನನ್ನೇ ವರಿಸಿದ ಯುವತಿ ; ಮಗಳ ಶ್ರಾದ್ಧ ಮಾಡಿ ಸಂಬಂಧ...

15 ವರ್ಷ ರಾಖಿ ಕಟ್ಟಿದ್ದ ಯುವಕನನ್ನೇ ವರಿಸಿದ ಯುವತಿ ; ಮಗಳ ಶ್ರಾದ್ಧ ಮಾಡಿ ಸಂಬಂಧ ಕಡಿದುಕೊಂಡ ಕುಟುಂಬ !

ಸುಮಾರು 15 ವರ್ಷಗಳಿಂದ ಅಣ್ಣ ಎಂದು ಭಾವಿಸಿ ರಾಖಿ ಕಟ್ಟುತ್ತಿದ್ದ ಯುವಕನನ್ನೇ ಯುವತಿಯೊಬ್ಬಳು ಪ್ರೇಮಿಸಿ ಮದುವೆಯಾಗಿರುವ ಅಪರೂಪದ ಹಾಗೂ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಈ ಮದುವೆಯು ಕುಟುಂಬಗಳ ನಡುವೆ ತೀವ್ರ ಕಲಹಕ್ಕೆ ಕಾರಣವಾಗಿದ್ದು, ಆಕ್ರೋಶಗೊಂಡ ಯುವತಿಯ ತಂದೆ ಜೀವಂತವಾಗಿದ್ದ ಮಗಳಿಗೇ ಸಾಂಕೇತಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸಿ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಿದ್ದಾರೆ.

ಘಟನೆಯ ವಿವರಗಳ ಪ್ರಕಾರ, ಪ್ರಯಾಗ್‌ರಾಜ್‌ನ ನಿವಾಸಿ 20 ವರ್ಷದ ನಂದಿನಿ ಪಾಂಡೆ ಎಂಬ ಯುವತಿಯು ತನ್ನದೇ ಗ್ರಾಮದ 22 ವರ್ಷದ ಶಾಶ್ವತ್ ಗುಪ್ತಾ ಎಂಬ ಯುವಕನೊಂದಿಗೆ ಸೆಪ್ಟೆಂಬರ್ 20 ರಂದು ಮನೆ ತೊರೆದು ಮದುವೆಯಾಗಿದ್ದಾಳೆ. ಯುವಕನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ತಮ್ಮ ಮನೆಗೆ ಬರುತ್ತಿದ್ದ ಹಾಗೂ ಆತನನ್ನು ಮಗನಂತೆ ಸಾಕಿ, ನಂದಿನಿ ಆತನಿಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದಳು ಎಂದು ಯುವತಿಯ ಕುಟುಂಬದವರು ತಿಳಿಸಿದ್ದಾರೆ. ಇಬ್ಬರ ನಡುವೆ ಇಂತಹ ಬಾಂಧವ್ಯ ಬೆಳೆದಿದೆ ಎಂಬ ಸುಳಿವು ತಮಗೆ ಕೊನೆಯವರೆಗೂ ಸಿಕ್ಕಿರಲಿಲ್ಲ ಎಂದು ಯುವತಿಯ ತಾಯಿ ಆಳಲು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ, ಕುಟುಂಬಸ್ಥರ ಆರೋಪಗಳನ್ನು ನಂದಿನಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾಳೆ. ಮದುವೆಯ ನಂತರ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ಆಕೆ, ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾಳೆ. ತಾನು ಗಂಡನ ಮನೆಯಲ್ಲಿ ಸಂತೋಷವಾಗಿದ್ದು, ತಮ್ಮ ದಾಂಪತ್ಯ ಜೀವನಕ್ಕೆ ಯಾರೂ ತೊಂದರೆ ನೀಡಬಾರದು ಎಂದು ವಿನಂತಿಸಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಜೊತೆಗೆ ತನ್ನ ಹೆತ್ತವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಂದಿನಿ, ತಂದೆಯು ತನ್ನ ಮೇಲೆ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡುತ್ತಿದ್ದರು ಮತ್ತು ತನಗೆ ಆರೋಗ್ಯ ಸರಿ ಇಲ್ಲದಿದ್ದಾಗ ಸೂಕ್ತ ಚಿಕಿತ್ಸೆ ಕೊಡಿಸಿರಲಿಲ್ಲ ಎಂದು ಹೇಳಿದ್ದಾಳೆ. ಮದುವೆಯಾದ ನಂತರ ಶಾಶ್ವತ್ ಮತ್ತು ಆತನ ಕುಟುಂಬಸ್ಥರು ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದಿದ್ದಾಳೆ. ಮನೆ ತೊರೆಯುವಾಗ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಹೋಗಿದ್ದಾಳೆ ಎಂಬ ಕುಟುಂಬದ ಆರೋಪವನ್ನು ನಿರಾಕರಿಸಿರುವ ಆಕೆ, ತಮ್ಮ ಮನೆಯಲ್ಲಿ ಅಷ್ಟೊಂದು ಹಣವೇ ಇರಲಿಲ್ಲ ಎಂದು ತಿಳಿಸಿದ್ದಾಳೆ.

ಮಗಳು ಮನೆ ತೊರೆದು ಮದುವೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸೆಪ್ಟೆಂಬರ್ 21 ರಂದು ಆಕೆಯ ತಂದೆ ಸಾಂಪ್ರದಾಯಿಕವಾಗಿ ಮಗಳ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಮಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕುಟುಂಬವು ಆಕೆಯೊಂದಿಗೆ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಎರಡೂ ಕಡೆಯವರಿಂದ ಪರಸ್ಪರ ಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿದ್ದು, ಘಟನೆಯ ನಿಜಾಂಶದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular