ಬಾಲಿವುಡ್ ಸಿನೆಮಾಗಳನ್ನು ನಿರ್ಮಾಣ ಮಾಡುವವರು ಕೂಡ ಮನುಷ್ಯರೇ. ಹಾಗಾಗಿ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ, ಡೈಲಾಗ್ ಇವುಗಳಲ್ಲೆಲ್ಲ ಸಣ್ಣಪುಟ್ಟ ತಪ್ಪುಗಳು ಕಾಮನ್. ಆದ್ರೆ ಕೆಲವೊಂದು ವಾಸ್ತವಿಕ ದೋಷಗಳು ಚರ್ಚೆಗೆ ಕಾರಣವಾಗುತ್ತವೆ. ಬಾಲಿವುಡ್ ಸೂಪರ್ ಹಿಟ್ ಚಿತ್ರಗಳಲ್ಲಿ ಇಂತಹ ತಪ್ಪುಗಳು ಏನಿತ್ತು ಅನ್ನೋದನ್ನು ನೋಡೋಣ.
ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ : ಈ ಚಿತ್ರದ ಸೆಕೆಂಡ್ ಹಾಫ್ ಕಥೆ ಪೂರ್ತಿಯಾಗಿ ಪಂಜಾಬ್ ನಲ್ಲಿ ನಡೆಯುತ್ತದೆ. ಭಾಷೆ ಕೂಡ ಪಂಜಾಬಿ. ಆದ್ರೆ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಿರುವುದು ಅಪ್ಟಾ ಎಂಬ ರೈಲು ನಿಲ್ದಾಣದಲ್ಲಿ. ಇದು ಪಂಜಾಬ್ ನಲ್ಲಿಲ್ಲ, ಮಹಾರಾಷ್ಟ್ರದಲ್ಲಿದೆ. ಆದಿತ್ಯ ಚೋಪ್ರಾಗೆ ಈ ಸಿಂಪಲ್ ವಿಷಯ ಹೊಳೆಯದೇ ಇರೋದು ಆಶ್ಚರ್ಯಕರ.
ರಾ ವನ್ : ರಾ ವನ್ ಚಿತ್ರವನ್ನು ನೀವೆಲ್ರೂ ನೋಡಿರ್ತೀರಾ. ಈ ಚಿತ್ರದಲ್ಲಿ ಶಾರುಖ್ ಖಾನ್ ಒಬ್ಬ ದಕ್ಷಿಣ ಭಾರತದ ಹಿಂದುವಿನ ಪಾತ್ರ ಮಾಡಿದ್ದಾರೆ. ಆದ್ರೆ ಅವರಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಶವಸಂಸ್ಕಾರ ಮಾಡಲಾಗುತ್ತದೆ. ಇನ್ನೊಂದು ದೃಶ್ಯದಲ್ಲಿ ಶಾರುಖ್ ಪತ್ನಿ ಪಾತ್ರ ಮಾಡಿದ್ದ ಕರೀನಾ, ಚಿತಾಭಸ್ಮವನ್ನು ನದಿಯಲ್ಲಿ ತೇಲಿಬಿಡುತ್ತಾಳೆ.
ಪಿಕೆ : ಪಿಕೆ ಚಿತ್ರದಲ್ಲಿ ಸರ್ಫರಾಜ್ (ಸುಶಾಂತ್ ಸಿಂಗ್ ರಜ್ಪೂತ್) ತಾನು ಬ್ರೂಜಸ್ ನಲ್ಲಿರೋ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಜಗ್ಗು (ಅನುಷ್ಕಾ ಶರ್ಮಾ) ಬಳಿ ಹೇಳ್ತಾನೆ. ಆದ್ರೆ ಬ್ರೂಜಸ್ ನಲ್ಲಿ ಪಾಕ್ ರಾಯಭಾರ ಕಚೇರಿಯೇ ಇಲ್ಲ. ಈ ವಿಚಾರ ನಿರ್ದೇಶಕರ ತಲೆಗೆ ಹೊಳೆದಿಲ್ಲ.
ಲಗಾನ್ : ಇದು 1892ರಲ್ಲಿ ನಡೆದ ಘಟನೆ ಆಧಾರಿತ ಚಿತ್ರ. ಲಗಾನ್ ಸಿನೆಮಾದಲ್ಲಿ ಪ್ರತಿಯೊಬ್ಬ ಬೌಲರ್ ಕೂಡ ಓವರ್ ಗೆ 6 ಬಾಲ್ ಹಾಕ್ತಾನೆ. ಆದ್ರೆ 1892ರಲ್ಲಿ ಇಂಗ್ಲೆಂಡ್ ಒಂದು ಓವರ್ ಗೆ 5 ಬಾಲ್ ಹಾಕಲು ಮಾತ್ರ ಅವಕಾಶ ನೀಡಿತ್ತು.
ಅಮರ್ ಅಕ್ಬರ್ ಅಂಥೋನಿ : 70ರ ದಶಕದ ಬ್ಲಾಕ್ ಬಸ್ಟರ್ ಚಿತ್ರ ಇದು. ಅಮಿತಾಭ್, ರಿಶಿ ಕಪೂರ್ ಹಾಗೂ ವಿನೋದ್ ಖನ್ನಾ ಸಹೋದರರ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ತಮ್ಮ ತಾಯಿ ನಿರುಪಾ ರಾಯ್ ಗೆ ಒಂದೇ ಬಾರಿಗೆ ಮೂವರೂ ರಕ್ತದಾನ ಮಾಡ್ತಾರೆ. ವಾಸ್ತವದಲ್ಲಿ ಇದು ಅಸಾಧ್ಯ.
ಹೈದರ್ : 90ರ ದಶಕದ ಕಾಶ್ಮೀರದ ಚಿತ್ರಣ ಹೈದರ್ ನಲ್ಲಿದೆ. ಆದ್ರೆ ಬಿಸ್ಮಿಲ್ ಹಾಡಿನ ದೃಶ್ಯಗಳಲ್ಲಿ ಸೆಲ್ಯುಲರ್ ಟವರ್ ಗಳು ಹತ್ತಾರು ಬಾರಿ ಕಾಣಿಸಿಕೊಳ್ಳುತ್ತವೆ. ಆ ಸಮಯದಲ್ಲಿ ಕಾಶ್ಮೀರದಲ್ಲಿ ಈ ಟವರ್ ಗಳೇ ಇರಲಿಲ್ಲ ಅನ್ನೋದು ನಿರ್ದೇಶಕರ ಗಮನಕ್ಕೆ ಬಂದಿಲ್ಲ.
ಧೂಮ್ 2 : ಹೃತಿಕ್ ರೋಶನ್ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಗಾಗಿ ಕಾಯುತ್ತಿರುತ್ತಾರೆ. ಈ ವೇಳೆ ಟಿವಿಯಲ್ಲಿ ಆತನ ಮುಂದಿನ ಕಳ್ಳತನದ ಬಗ್ಗೆ ಸುದ್ದಿ ಪ್ರಸಾರವಾಗುತ್ತಿರುತ್ತದೆ. ಕೆಳಭಾಗದಲ್ಲಿ ಸೆನ್ಸೆಕ್ಸ್ ಏರಿಳಿತವನ್ನು ಕೊಡಲಾಗಿದೆ. ಸೆನ್ಸೆಕ್ಸ್ ಶೇ.30ರಷ್ಟು ಏರಿಕೆ ಕಂಡಿರೋದಾಗಿ ಬರೆಯಲಾಗಿದೆ. ಆದ್ರೆ ವಾಸ್ತವವಾಗಿ ಸೆನ್ಸೆಕ್ಸ್ ಏರಿಳಿತ ಕಾಣುವುದು ಗರಿಷ್ಠ ಶೇ.5ರಷ್ಟು ಮಾತ್ರ. 2009ರಲ್ಲಿ ದಾಖಲೆಯ ಶೇ.17.34ರಷ್ಟು ಏರಿಕೆ ಕಂಡಿತ್ತು. ನಿಫ್ಟಿ ಕೂಡ ಶೇ.27ರಷ್ಟು ಇಳಿಕೆ ಕಂಡಿರುವುದಾಗಿ ಬರೆಯಲಾಗಿದೆ. ಇದು ಕೂಡ ವಾಸ್ತವಕ್ಕೆ ದೂರವಾದ ಸಂಗತಿ.
ಅಂದಾಜ್ ಅಪ್ನಾ ಅಪ್ನಾ: ಈ ಚಿತ್ರದಲ್ಲಿ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಹೇರ್ ಸ್ಟೈಲ್ ದೃಶ್ಯದಿಂದ ದೃಶ್ಯಕ್ಕೆ ಬದಲಾಗುತ್ತಲೇ ಇರುತ್ತದೆ. ಒಮ್ಮೆ ಶಾರ್ಟ್ ಹೇರ್ ಇದ್ರೆ ಮತ್ತೊಮ್ಮೆ ಲಾಂಗ್ ಹೇರ್. ಈ ಚಿತ್ರದ ಶೂಟಿಂಗ್ ಮೂರು ವರ್ಷಗಳ ಕಾಲ ನಡೆದಿದೆ. ಆ ಸಮಯದಲ್ಲಿ ಸಲ್ಲು ಸಾಜನ್ ಚಿತ್ರದ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ರು. ಅಲ್ಲಿ ಸಲ್ಲುಗೆ ಉದ್ದನೆಯ ಕೂದಲಿತ್ತು.
ರಾಕ್ ಸ್ಟಾರ್ : ಸದ್ದಾ ಹಕ್ ಹಾಡಿನಲ್ಲಿ ನಿರ್ದೇಶಕ ಇಮ್ತಿಯಾಝ್ ಅಲಿ ಜೋರ್ಡನ್ ಬಗ್ಗೆ ಬರೆದಿರುವ ಪತ್ರಿಕೆಯ ಪುಟವೊಂದನ್ನು ಬಳಸಿದ್ದಾರೆ. ಆದ್ರೆ ಅದೇ ಪೇಜ್ ನಲ್ಲಿ ಶಾರುಖ್ ಹಾಗೂ ಕತ್ರೀನಾರ ಜಬ್ ತಕ್ ಹೈ ಜಾನ್ ಚಿತ್ರದ ಬಗ್ಗೆ ಬರೆಯಲಾಗಿದೆ. ಆ ಚಿತ್ರ ಬಿಡುಗಡೆಯಾಗಿದ್ದು 2012ರಲ್ಲಿ. ಚಿತ್ರದಲ್ಲಿರೋ ದೃಶ್ಯ 2011ರ ಭಾರತ-ಪಾಕಿಸ್ತಾನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಕುರಿತು.
ಪ್ಯಾರ್ ಕಾ ಪಂಚನಾಮಾ : ಈ ಚಿತ್ರದ ದೃಶ್ಯವೊಂದರಲ್ಲಿ ಮೂವರು ಸ್ನೇಹಿತರು ಮೋಟಾರ್ ಸೈಕಲ್ ನಲ್ಲಿ ಡಾಭಾಕ್ಕೆ ಬರ್ತಾರೆ. ಆದ್ರೆ ಜೀಪ್ ನಲ್ಲಿ ಅಲ್ಲಿಂದ ತೆರಳ್ತಾರೆ.
ಯೆ ಜವಾನಿ ಹೈ ದಿವಾನಿ : ದೃಶ್ಯವೊಂದರಲ್ಲಿ ಬನ್ನಿ (ರಣಬೀರ್ ಕಪೂರ್) ರೈಲು ಏರುವ ಮೊದಲೇ ನೈನಾ (ದೀಪಿಕಾ ಪಡುಕೋಣೆ) ಬಳಿ ಇದ್ದ ಪುಸ್ತಕ ತೆಗೆದುಕೊಳ್ತಾನೆ. ಆದ್ರೆ ರೈಲು ಏರಿದ ಮೇಲು ಆ ಪುಸ್ತಕ ನೈನಾಳ ಕೈಯಲ್ಲೇ ಇರುತ್ತದೆ. ಇದ್ಹೇಗೆ ಸಾಧ್ಯ?