ಪ್ರೀತಿ ಅನ್ನೋದು ನಂಬಿಕೆಯ ಮೇಲೆ ನಿಂತಿರುತ್ತೆ ಅನ್ನೋದು ಹಳೆಯ ಮಾತು ಆದರೆ ಅದೇ ಪ್ರೀತಿಗೆ ವಿಮೆ (Insurance) ಮಾಡಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸಬಹುದು ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ ನಾವು ಹೆಲ್ತ್ ಅಥವಾ ಲೈಫ್ ಇನ್ಶೂರೆನ್ಸ್ ಬಗ್ಗೆ ಕೇಳಿರುತ್ತೇವೆ,
ಚೀನಾದ ಯುವತಿಯೊಬ್ಬಳು ತಾನು ಪ್ರೀತಿಸಿದ ಹುಡುಗನಿಗೆ ಪ್ರಪೋಸ್ ಮಾಡುವ ಮೊದಲೇ ಈ ವಿಚಿತ್ರ ಲವ್ ಇನ್ಶೂರೆನ್ಸ್ (Love Insurance) ಮಾಡಿಸಿ ಈಗ ಮದುವೆಯಾದ ಬೆನ್ನಲ್ಲೇ ಬರೋಬ್ಬರಿ 1.25 ಲಕ್ಷ ರೂಪಾಯಿ ಹಣವನ್ನು ಬಂಪರ್ ಉಡುಗೊರೆಯಾಗಿ ಪಡೆದಿದ್ದಾಳೆ. ಹತ್ತು ವರ್ಷಗಳ ಸುದೀರ್ಘ ಪ್ರೀತಿಯ ನಂತರ ಈ ದಂಪತಿಗೆ ಒಲಿದು ಬಂದ ಅದೃಷ್ಟದ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಏನಿದು ಲವ್ ಇನ್ಶೂರೆನ್ಸ್?
ಇದು ಚೀನಾದಲ್ಲಿ ಆರಂಭವಾಗಿದ್ದ ಒಂದು ವಿಶಿಷ್ಟ ವಿಮಾ ಪಾಲಿಸಿ. ಶಾಂಕ್ಸಿ ಪ್ರಾಂತ್ಯದ ‘ವು’ ಅನ್ನೋ ಯುವತಿ 2016ರಲ್ಲಿ ಬರೀ 29 ಡಾಲರ್ (ಸುಮಾರು 2,500 ರೂ.) ನೀಡಿ ಈ ವಿಮೆಯನ್ನು ಖರೀದಿಸಿದ್ದರು. ವಿಶೇಷವೆಂದರೆ, ತಾವು ಇಷ್ಟಪಟ್ಟ ಹುಡುಗನಿಗೆ ಪ್ರೀತಿಯ ವಿಷಯ ತಿಳಿಸುವ ಮೊದಲೇ ಅವರು ಈ ವಿಮೆ ಮಾಡಿಸಿದ್ದರು.ಚೈನಾ ಲೈಫ್ ಪ್ರಾಪರ್ಟಿ ಆಂಡ್ ಕ್ಯಾಶುವಲ್ಟಿ ಇನ್ಶೂರೆನ್ಸ್’ ಕಂಪನಿಯು ಈ ಪಾಲಿಸಿಯನ್ನು ಬಿಡುಗಡೆ ಮಾಡಿತ್ತು
ಷರತ್ತು ಕೇಳಿದ್ರೆ ಶಾಕ್ ಆಗ್ತೀರಾ
ಸಾಮಾನ್ಯವಾಗಿ ವಿಮೆ ಎಂದರೆ ಏನಾದರೂ ಅನಾಹುತ ಅಥವಾ ಡ್ಯಾಮೇಜ್ ಆದರೆ ಹಣ ಸಿಗುತ್ತದೆ. ಆದರೆ ಇಲ್ಲಿ ನಿಯಮವೇ ಬೇರೆ ಇತ್ತು ಪ್ರೀತಿ ಅರ್ಧಕ್ಕೆ ನಿಂತರೆ ಅಥವಾ ಬ್ರೇಕಪ್ (Heart Break) ಆದರೆ ಈ ವಿಮೆ ಹಣ ಸಿಗುವುದಿಲ್ಲಪ್ರೀತಿಸಿದ ವ್ಯಕ್ತಿಯ ಜೊತೆಯೇ ಸುದೀರ್ಘ ಕಾಲ ಸಂಬಂಧ ಹೊಂದಿದ್ದು, ಕನಿಷ್ಠ 3 ವರ್ಷಗಳ ನಂತರ ಮದುವೆಯಾದರಷ್ಟೇ ಈ ವಿಮೆ ಕ್ಲೈಮ್ ಮಾಡಲು ಸಾಧ್ಯವಿತ್ತು.
ವಿಮೆ ಖರೀದಿಸಿದ 3 ವರ್ಷಗಳ ನಂತರ ಮತ್ತು 10 ವರ್ಷಗಳ ಒಳಗಾಗಿ ವಿಮೆದಾರರು ತಾವು ಹೆಸರಿಸಿದ ಸಂಗಾತಿಯನ್ನೇ ಮದುವೆಯಾದರೆ, ಅವರಿಗೆ 10,000 ಗುಲಾಬಿಗಳು ಅಥವಾ 0.5 ಕ್ಯಾರೆಟ್ ವಜ್ರದ ಉಂಗುರ ಅಥವಾ ಅದಕ್ಕೆ ಸಮನಾದ ನಗದು ಹಣವನ್ನು ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು.
ಶಾಲಾ ದಿನಗಳ ಪ್ರೀತಿಗೆ ಮದುವೆಯ ಮುದ್ರೆ
ವು ತನ್ನ ಶಾಲಾ ದಿನಗಳಲ್ಲಿ ವಾಂಗ್ ಅನ್ನೋ ಹುಡುಗನ ಇಷ್ಟಪಟ್ಟಿದ್ದಳು. ಸುದೀರ್ಘ 10 ವರ್ಷಗಳ ಕಾಲ ಪ್ರೀತಿಯ ಸಾಗರದಲ್ಲಿ ತೇಲಿದ್ದ ಈ ಜೋಡಿ, ಅಕ್ಟೋಬರ್ 2025ರಲ್ಲಿ ಅಧಿಕೃತವಾಗಿ ವಿವಾಹ ನೋಂದಣಿ ಮಾಡಿಕೊಂಡರು. ಪಾಲಿಸಿಯ ನಿಯಮದಂತೆ ಮದುವೆಯ ಬೆನ್ನಲ್ಲೇ ಈ ನವಜೋಡಿಗೆ ವಿಮಾ ಹಣ ಪಡೆಯುವ ಸುವರ್ಣ ಅವಕಾಶ ಒದಗಿಬಂತು.
ಕಂಪನಿಯು ನೀಡಿದ್ದ ‘10,000 ಗುಲಾಬಿ ಹೂವುಗಳ’ ಆಫರ್ ಅನ್ನು ನಿರ್ವಹಿಸುವುದು ಕಷ್ಟವೆಂದು ಅರಿತ ದಂಪತಿ, ಚಾಣಾಕ್ಷತನದಿಂದ ನಗದು ಹಣವನ್ನೇ ಆರಿಸಿಕೊಂಡರು.ಹೂಡಿಕೆಯ ಲೆಕ್ಕಾಚಾರ ಹೀಗಿದೆ,ಆರಂಭಿಕ ಹೂಡಿಕೆ ಕೇವಲ ₹2,500 ಒಲಿದು ಬಂದ ಮೊತ್ತ ಬರೋಬ್ಬರಿ ₹1.25 ಲಕ್ಷ ($1,400)
ಚೀನಾದಲ್ಲಿ ಇಂತಹ ವಿಮೆಗಳು 2017ರಲ್ಲೇ ಸ್ಥಗಿತಗೊಂಡಿವೆ. ಕೇವಲ ಪ್ರಚಾರಕ್ಕಾಗಿ ಇಂತಹ ಗಿಮಿಕ್ ಪಾಲಿಸಿಗಳನ್ನು ಮಾಡಬಾರದು ಎಂಬ ಸರ್ಕಾರದ ಆದೇಶದ ಮೇರೆಗೆ ಇವುಗಳನ್ನು ಬ್ಯಾನ್ ಮಾಡಲಾಗಿದೆ. ಆದರೆ 2017ಕ್ಕಿಂತ ಮೊದಲು ಪಾಲಿಸಿ ಪಡೆದವರಿಗೆ ಮಾತ್ರ ಈ ಲಾಭ ಸಿಗುತ್ತಿದೆ

