ಕರ್ನಾಟಕ ಕಾಂಗ್ರೆಸ್ ಮನರೇಗಾ ಹೆಸರು ಬದಲಾವಣೆ ವಿರುದ್ಧ ಬೃಹತ್ ಹೋರಾಟ ನಡೆಸಲಾಗುತ್ತದೆ. ಎಂದು ಘೋಷಣೆ ಮಾಡಿದೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ‘ವಿಕಸಿತ ಭಾರತ: ಜಿ ರಾಮ್ ಜಿ’ (Viksit Bharat: G Ram G) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.
ಕರ್ನಾಟಕ ಸರ್ಕಾರ ‘ವಿಕಸಿತ ಭಾರತ: ಜಿ ರಾಮ್ ಜಿ’ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ.
ಜನವರಿ 27 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧದಲ್ಲಿ ‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಈ ಕುರಿತು ವಿವರವಾದ ಚರ್ಚೆಗಳು ನಡೆಯಲಿದ್ದು, ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಅಧಿವೇಶನವನ್ನು ಸ್ವಾಗತಿಸಿವೆ.
ಕಾಂಗ್ರೆಸ್ ಹೋರಾಟ: ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಮನರೇಗಾ ಉಳಿಸಿ ಹೋರಾಟ”ದ ಪೂರ್ವಸಿದ್ಧತಾ ಸಭೆ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು. ಈಗಾಗಲೇ ಕಾಂಗ್ರೆಸ್ ಈ ಕುರಿತು ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.
ಸಿದ್ದರಾಮಯ್ಯ ಮಾತನಾಡಿ, “ಹಿಂದಿನ ಯುಪಿಎ ಸರ್ಕಾರ ಮನರೇಗಾ ಯೋಜನೆಯ ಮೂಲಕ ಕೋಟ್ಯಂತರ ಬಡಜನರಿಗೆ ಉದ್ಯೋಗದ ಹಕ್ಕನ್ನು ಕಾನೂನಾತ್ಮಕಗೊಳಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರ ಮನರೇಗಾ ಕೈಬಿಟ್ಟು, ವಿಬಿಜಿ ರಾಮ್ ಜಿ ಎಂಬ ಹೊಸ ಯೋಜನೆ ಜಾರಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿಯವರ ಹೆಸರೂ ಇಲ್ಲದ, ಉದ್ಯೋಗದ ಖಾತರಿಯನ್ನೂ ನೀಡದ ಈ ಯೋಜನೆಯಿಂದ ಕೂಲಿಕಾರ್ಮಿಕರು, ರೈತರು, ಮಹಿಳೆಯರ ಬದುಕು ದುಸ್ಥರಗೊಳ್ಳಲಿದೆ. ಮನರೇಗಾ ಮರುಜಾರಿಯಾಗುವ ವರೆಗೆ ಹೋರಾಟ ಕೈಬಿಡುವುದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ನಮ್ಮ ನೇರ ಎಚ್ಚರಿಕೆ” ಎಂದು ಹೇಳಿದ್ದಾರೆ.
ಬೃಹತ್ ಹೋರಾಟ: ಕಾಂಗ್ರೆಸ್ ಪಕ್ಷ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡುವುದರ ವಿರುದ್ಧ ಬೃಹತ್ ಹೋರಾಟ ರೂಪಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಇಲ್ಲಿಯೂ ಹೋರಾಟ ನಡೆಯಲಿದೆ.
“ಮನರೇಗಾ ಕಾಯ್ದೆ ಪುನರ್ಸ್ಥಾಪನೆ ಆಗಿ ವಿಬಿಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ಹೋರಾಟ ಮಾಡಲಾಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಮನರೇಗಾ ರದ್ದು ಮಾಡಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಮನುವಾದಿಗಳಿಗೆ ಅಲರ್ಜಿ” ಎಂದು ದೂರಿದ್ದಾರೆ.
“ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮನರೇಗಾ ಕಾಯ್ದೆಯನ್ನು ಗ್ರಾಮೀಣ ಪ್ರದೇಶದ ಬಡವರಿಗೆ ಕೆಲಸದ ಹಕ್ಕು ನೀಡಲೆಂದು ಮೂಲಭೂತ ಹಕ್ಕನ್ನಾಗಿದ್ದರು. ನಿರುದ್ಯೋಗ, ಆಹಾರ, ಮಾಹಿತಿ, ಕಾಡಿನಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ಅರಣ್ಯ ವಾಸಿಗಳಿಗೆ ಹಕ್ಕು ಒದಗಿಸುವ ಕಾಯ್ದೆಗಳನ್ನು ರೂಪಿಸಿದರು. 20 ವರ್ಷಗಳಿಂದ ಜಾರಿಯಲ್ಲಿದ್ದ ಕಾಯ್ದೆಯಡಿ 12.16 ಕೋಟಿ ಕಾರ್ಮಿಕರು ದೇಶದಲ್ಲಿ ಕೆಲಸ ಮಾಡುತ್ತಿದ್ದು, 6.21ಕೋಟಿ ಮಹಿಳೆಯರು ಕೆಲಸಮಾಡುತ್ತಿದ್ದಾರೆ” ಎಂದು ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
“ಗ್ರಾಮೀಣ ಪ್ರದೇಶದಲ್ಲಿ 365 ದಿನಗಳ ಕಾಲ ಕೆಲಸ ಕೇಳಬಹುದಾಗಿತ್ತು. ಕಾರ್ಮಿಕರು ಅವರ ಊರಿನಲ್ಲಿ, ಅವರ ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಇದನ್ನು ಬದಲಾಯಿಸಿ ಮೋದಿ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಇದು ದಶರಥ ರಾಮ, ಸೀತಾ ರಾಮ ಅಥವಾ ಕೌಸಲ್ಯಾ ರಾಮನಲ್ಲ, ಬದಲಿಗೆ ಮಹಾತ್ಮಾ ಗಾಂಧಿ ಕೊಂದ ನಾಥೂರಾಮ. ಗಾಂಧಿಯವರನ್ನು ಮೊತ್ತೊಮ್ಮೆ ಕೊಲ್ಲುತ್ತಿದ್ದಾರೆ. ಕಾಯ್ದೆಯಡಿ ಕೆಲಸ ಕೊಡಲಿಲ್ಲ ಎಂದು ನ್ಯಾಯಾಲಯಕ್ಕೆ ಕೂಡ ಹೋಗಬಹುದಿತ್ತು, ಈಗ ಆ ಹಕ್ಕು ಸಹ ಇಲ್ಲ” ಎಂದು ಆರೋಪಿಸಿದ್ದಾರೆ.
“ಈಗಿನ ಕಾಯ್ದೆಯಡಿ ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಇಂಥ ಕಡೆ ಕೆಲಸ ಎಂದು ನಿಗದಿ ಮಾಡುತ್ತದೆ. ಅಲ್ಲಿ ಕೆಲಸ ಮಾಡಬೇಕು. ಈಗ ರಾಜ್ಯಗಳು 40% ವೆಚ್ಚವನ್ನು ಭರಿಸಬೇಕಿದೆ. 2,500 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ. ಇದು ರಾಜ್ಯಗಳ ಮೇಲೆ ಹೇರಿಕೆ. ನಾವು ನರೇಗಾ ಬಚಾವ್ ಆಂದೋಲನವನ್ನು ರೂಪಿಸಿದ್ದೇವೆ. ಇದು ಜನಾಂದೋಲನವಾಗಿ ಪರಿವರ್ತನೆ ಆಗಬೇಕು, ಆ ಕೆಲಸವನ್ನು ನಾವು ಮಾಡೋಣ” ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

