ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವುದು ಭಾರತೀಯ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ. ಇದೇ ಮೊದಲ ಬಾರಿಗೆ ಪಥಸಂಚಲನದಲ್ಲಿ ಪ್ರಾಣಿಗಳು ಸಹ ಹೆಜ್ಜೆ ಹಾಕಲಿವೆ. ಈ ಪಟ್ಟಿಯಲ್ಲಿ ಕರ್ನಾಟಕದ ಪ್ರಸಿದ್ಧ ಮುಧೋಳ ನಾಯಿಗಳು ಸಹ ಸೇರಿವೆ.
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರಾಣಿಗಳ ಪರೇಡ್ ನಡೆಯಲಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಪ್ರಾಣಿಗಳು ಈ ಪರೇಡ್ನಲ್ಲಿ ಭಾಗವಹಿಸಲಿವೆ.
ದೇಶ ರಕ್ಷಣೆಯಲ್ಲಿ ತೊಡಗಿರುವ ಪ್ರಾಣಿಗಳನ್ನು ಪರಿಚಯಿಸುವುದು ಈ ಪ್ರಾಣಿಗಳ ಪರೇಡ್ ಉದ್ದೇಶವಾಗಿದೆ. ಕರ್ನಾಟಕದ ಮುಧೋಳ ನಾಯಿ, ಒಂಟೆಗಳು, ಕುದುರೆ, ಹದ್ದು, ಗಿಡುಗ ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿವೆ.
ಮುಧೋಳ ನಾಯಿಗಳು: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಈ ನಾಯಿಗಳು ಈಗಾಗಲೇ ಭಾರತೀಯ ಸೇನೆಯ ಭಾಗವಾಗವಾಗಿದ್ದು, ಅವುಗಳಿಗೆ ತರಬೇತಿ ನೀಡಿ ವಿವಿಧ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಗಣರಾಜ್ಯೋತ್ಸವದ ಪಥಸಂಚಲನದ ತಾಲೀಮು ಬುಧವಾರ ಆರಂಭವಾಗಿದೆ. ವಿವಿಧ ಪ್ರಾಣಿಗಳನ್ನು ಈ ತಾಲೀಮಿನ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಯಾವ ಪ್ರಾಣಿಗಳು ಅಂತಿಮ ದಿನದ ಪರೇಡ್ನಲ್ಲಿ ಭಾಗವಹಿಸಲಿವೆ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಅವಳಿ ಡುಬ್ಬದ ಒಂಟೆಗಳು, ಜನ್ಸ್ಕರ್ ಕುದುರೆ, ಹದ್ದು/ ಗಿಡುಗ, ನಾಯಿಗಳು ಗಣರಾಜ್ಯೋತ್ಸವದ ಪಥಸಂಚಲನದ ತರಬೇತಿಯಲ್ಲಿ ಹೆಜ್ಜೆ ಹಾಕಿದವು. ಭಾರತೀಯ ಸೇನೆ ರಿಮೌಂಟ್ ಮತ್ತು ಪಶುವೈದ್ಯದಳದಿಂದ ಆರಿಸ್ಪಟ್ಟ ಈ ವಿಶಿಷ್ಟ ತುಕಡಿಯನ್ನು ಅವಳಿ ಡುಬ್ಬದ 2 ಒಂಟೆಗಳು ಮುನ್ನಡೆಸಲಿವೆ.
ಈ ಒಂಟೆಗಳು ಲಡಾಖ್ನ ಮರುಭೂಮಿಯಲ್ಲಿ ಕಾರ್ಯಾಚರಣೆ ನಡೆಸಲು ಇತ್ತೀಚೆಗೆ ಸೇರ್ಪಡೆಗೊಂಡಿವೆ. 250 ಕೆಜಿ ಭಾರವನ್ನು ಹೊತ್ತು ಇವು ದುರ್ಗಮ ಪ್ರದೇಶದಲ್ಲಿ ಸಂಚಾರವನ್ನು ನಡೆಸಬಲ್ಲವು.
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ 4 ಜನ್ಸ್ಕರ್ ತಳಿಯ ಕುದುರೆಗಳು, 4 ಹದ್ದು/ ಗಿಡುಗ, 10 ಭಾರತೀಯ ತಳಿಯ ಸೇನಾ ನಾಯಿಗಳು, 6 ಸಾಂಪ್ರದಾಯಿಕ ಮಿಲಿಟರಿ ನಾಯಿಗಳು ಪಾಲ್ಗೊಳ್ಳಲಿವೆ.
ಟಿಕೆಟ್ ಬೆಲೆ ಎಷ್ಟು?; ಗಣರಾಜ್ಯೋತ್ಸವ 2026 ಹತ್ತಿರವಾಗುತ್ತಿದ್ದಂತೆ ಅನೇಕ ಜನರು ಇಂಡಿಯಾ ಗೇಟ್ನಲ್ಲಿ ನಡೆಯುವ ಐತಿಹಾಸಿಕ ಪರೇಡ್ ಅನ್ನು ನೇರವಾಗಿ ವೀಕ್ಷಿಸಲು ಕಾಯುತ್ತಿದ್ದಾರೆ. ಈ ವರ್ಷದ ಪರೇಡ್ಗೆ ಟಿಕೆಟ್ ದರಗಳ ಬಗ್ಗೆ ರಕ್ಷಣಾ ಸಚಿವಾಲಯವು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್ನ ಟಿಕೆಟ್ ಬುಕ್ಕಿಂಗ್ ಜನವರಿ 2 ರಿಂದ ಜನವರಿ 11ರ ತನಕ ನಡೆದಿತ್ತು. ಅಧಿಕೃತ ಸರ್ಕಾರಿ ಪೋರ್ಟಲ್ಗಳ ಮೂಲಕ ಟಿಕೆಟ್ ಲಭ್ಯವಿತ್ತು. ಈ ವರ್ಷವೂ ಅಧಿಕಾರಿಗಳು ಇದೇ ರೀತಿಯ ವೇಳಾಪಟ್ಟಿಯನ್ನು ಅನುಸರಿಸುವ ಸಾಧ್ಯತೆಯಿದೆ.
ಟಿಕೆಟ್ ಕಾಯ್ದಿರಿಸಲು ಆಸಕ್ತಿ ಇರುವವರು ಅಧಿಕೃತ ವೆಬ್ಸೈಟ್ಗಳಾದ rashtraparv.gov.in ಮತ್ತು aamantran.mod.gov.in ಗೆ ಭೇಟಿ ನೀಡಬೇಕಿದೆ. ಅಧಿಕೃತ ಘೋಷಣೆಯಾದ ನಂತರ ಈ ವೆಬ್ಸೈಟ್ಗಳಲ್ಲಿ ಟಿಕೆಟ್ಗಳು ಲಭ್ಯವಿರಲಿದೆ.
ಪರೇಡ್ ಟಿಕೆಟ್ನ ದರಗಳು ಇನ್ನೂ ಘೋಷಣೆಯಾಗಿಲ್ಲ. ಆಸನ ವ್ಯವಸ್ಥೆ ಮತ್ತು ಎನ್ಕ್ಲೋಸರ್ ಆಧಾರದ ಮೇಲೆ ಟಿಕೆಟ್ ದರವು ರೂ. 20 ರಿಂದ ರೂ. 100 ರವರೆಗೆ ಇರುತ್ತದೆ. ಹಿಂದಿನ ವರ್ಷದ ನಿಯಮಗಳಂತೆ, ನಿಗದಿತ ವಯೋಮಿತಿಗಿಂತ ಮೇಲ್ಪಟ್ಟ ಮಕ್ಕಳಿಗೆ ಪ್ರತ್ಯೇಕ ಟಿಕೆಟ್ ಕಡ್ಡಾಯವಾಗಿರುತ್ತದೆ.
ಬೀಟಿಂಗ್ ರಿಟ್ರೀಟ್ ಸಮಾರಂಭದ ಟಿಕೆಟ್ಗಳು. ಫುಲ್ ಡ್ರೆಸ್ ರಿಹರ್ಸಲ್ (ಜನವರಿ 28) ರೂ. 20 ಮತ್ತು ಬೀಟಿಂಗ್ ರಿಟ್ರೀಟ್ ಮುಖ್ಯ ಕಾರ್ಯಕ್ರಮ ಜನವರಿ 29 ರೂ. 100. ಸಾಮಾನ್ಯವಾಗಿ ರಕ್ಷಣಾ ಸಚಿವಾಲಯವು ಈ ದರಗಳನ್ನು ನಿಗದಿಪಡಿಸುತ್ತದೆ ಮತ್ತು ಈ ವರ್ಷ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.

