ಎಲ್ಲೆಡೆ ಈಗ ಆನ್ ಲೈನ್ ಶಾಪಿಂಗ್ ಭರಾಟೆ ಜೋರಾಗಿದೆ. ಇದು ಗ್ರಾಹಕರ ಸಮಯವನ್ನು ಉಳಿತಾಯ ಮಾಡುತ್ತದೆ. ಹಣ ಪಾವತಿಸಲು ಕೂಡ ನಗದನ್ನೇ ಕೊಡಬೇಕೆಂದೇನಿಲ್ಲ. ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಮೂಲಕವೂ ಪಾವತಿ ಮಾಡಬಹುದು.
ಡಿಸ್ಕೌಂಟ್, ರಿವಾರ್ಡ್ ಪಾಯಿಂಟ್, ಕ್ಯಾಶ್ ಬ್ಯಾಕ್ ಆಫರ್ ಗಳ ಹೆಸರಲ್ಲಿ ಆನ್ ಲೈನ್ ಶಾಪಿಂಗ್ ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತವೆ. ಬಹಳಷ್ಟು ಉತ್ಪನ್ನಗಳ ಖರೀದಿಗೆ ಇಎಂಐ ಸೌಲಭ್ಯವೂ ಇದೆ. ಈಗ ನೀವು ವಸ್ತುವನ್ನು ಕೊಂಡುಕೊಂಡು ಕಂತಿನಲ್ಲಿ ಹಣ ತುಂಬಬಹುದು.
ಆದ್ರೆ ಈ ಸೌಲಭ್ಯಗಳಿಂದ ನೀವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಆನ್ ಲೈನ್ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಶಾಪಿಂಗ್ ಪ್ಲಾನ್ ಸಿದ್ಧಪಡಿಸಿ : ನಿಮಗೆ ಯಾವ್ಯಾವ ವಸ್ತುಗಳನ್ನು ಖರೀದಿಸಬೇಕು ಅನ್ನೋದನ್ನು ಪಟ್ಟಿ ಮಾಡಿಕೊಳ್ಳಿ, ಅದನ್ನು ಬಿಟ್ಟು ಬೇರೆ ವಸ್ತುಗಳ ಕಡೆಗೆ ಹೆಚ್ಚು ಗಮನ ಹರಿಸಬೇಡಿ. ನಿಮಗೆ ಬೇಕಾದ ಪ್ರಾಡಕ್ಟ್ ಗೆ ಬೆಸ್ಟ್ ಆಫರ್ ಎಲ್ಲಿದೆ ಅನ್ನೋದನ್ನು ಚೆಕ್ ಮಾಡಿ. ಖರೀದಿಗೂ ಮುನ್ನ ನಿಮಗೆ ಅದರ ಅಗತ್ಯವಿದೆಯಾ ಅನ್ನೋದನ್ನು ಇನ್ನೊಮ್ಮೆ ಪ್ರಶ್ನಿಸಿಕೊಳ್ಳಿ.
ಕ್ರೆಡಿಟ್ ಕಾರ್ಡ್ ಬಳಕೆ ವೇಳೆ ಎಚ್ಚರ : ವಿವಿಧ ಕ್ರೆಡಿಟ್ ಕಾರ್ಡ್ ಗಳ ಮೇಲೆ ಆನ್ ಲೈನ್ ಸ್ಟೋರ್ ಗಳಲ್ಲಿ ಆಫರ್ ಇರುತ್ತದೆ. ಅದನ್ನು ನೋಡಿದಾಕ್ಷಣ ಖರೀದಿಗೆ ಮುಗಿಬೀಳಬೇಡಿ. ಯಾಕಂದ್ರೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ ಹಣವನ್ನು ಮತ್ತೆ ನೀವು ತಿಂಗಳಾಂತ್ಯದಲ್ಲಿ ಕಟ್ಟಬೇಕಾಗುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಪ್ರೊಸೆಸಿಂಗ್ ಚಾರ್ಜ್ ಹಾಗೂ ಬಡ್ಡಿ ವಿಧಿಸುತ್ತಾರೆ. ಅದರ ಬಗ್ಗೆ ಗಮನವಿರಲಿ.
ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳಿ : ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಕೌಂಟ್, ಆನ್ ಲೈನ್ ಸ್ಟೋರ್ ಮತ್ತು ಮೊಬೈಲ್ ವಾಲೆಟ್ ಗಳೊಂದಿಗೆ ಡಿಫಾಲ್ಟ್ ಪೇಮೆಂಟ್ ಮೋಡ್ ಹೊಂದಿರುತ್ತವೆ. ಹಾಗಾಗಿ ನಿಮ್ಮ ವಹಿವಾಟುಗಳೆಲ್ಲ ಇದೇ ಅಕೌಂಟ್ ನಿಂದ್ಲೇ ನಡೆಯುತ್ತವೆ. ನೀವು ಶಾಪಿಂಗ್ ಪ್ರಿಯರಾಗಿದ್ದರೆ ನಿಮ್ಮ ಅಕೌಂಟ್ ನಲ್ಲಿರೋ ಬ್ಯಾಲೆನ್ಸ್ ಕಡೆಗೂ ಗಮನವಿರಲಿ. ಮಿನಿಮಮ್ ಬ್ಯಾಲೆನ್ಸ್ ಇಲ್ಲದೇ ಇದ್ರೆ ಕೆಲವೊಂದು ಬ್ಯಾಂಕ್ ಗಳು ದಂಡ ವಿಧಿಸುತ್ತವೆ.
ಡೆಲಿವರಿ ವೆಚ್ಚ : ಕೆಲವೊಮ್ಮೆ ಡೆಲಿವರಿ ವೆಚ್ಚದಿಂದ ಪಾರಾಗಲೆಂದೇ ನೀವು ಇನ್ನೊಂದಷ್ಟು ವಸ್ತುಗಳನ್ನು ಅನಿವಾರ್ಯವಾಗಿ ಖರೀದಿಸುವ ಸಾಧ್ಯತೆಗಳಿರುತ್ತವೆ. ಡೆಲಿವರಿ ಚಾರ್ಜಸ್ ತಪ್ಪಿಸಿಕೊಳ್ಳಲು ಬೇಡದ ವಸ್ತುಗಳನ್ನೆಲ್ಲ ಕೊಂಡುಕೊಳ್ಳಬೇಡಿ. ನಿಮ್ಮ ಲಿಮಿಟ್ ಗಮನದಲ್ಲಿರಲಿ. ನಿಮಗೆ ಬೇಕಾದ ವಸ್ತುಗಳನ್ನು ಕಾರ್ಟ್ ಗೆ ಆ್ಯಡ್ ಮಾಡಿಡಿ. ಅಗತ್ಯ ಬಿದ್ದಾಗ ಉಳಿದ ವಸ್ತುಗಳೊಂದಿಗೆ ಖರೀದಿ ಮಾಡಬಹುದು.