
ಧಾರವಾಡ: ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಚೈತನ್ಯ ಕಾಲೋನಿ ನಿವಾಸಿ ಸಲೀಂ ಮಮದಾಪುರ ಯುಗಾದಿ ದಿನವೇ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂತಹ ಫೋಟೋವನ್ನು ಸ್ಟೇಟಸ್ ಹಾಕಿದ್ದ. ಇದು ಬಜರಂಗದಳ ಕಾರ್ಯಕರ್ತರಿಗೆ ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆಗಾಗಲೇ ವಿಚಾರ ಗೊತ್ತಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಕಣಿಬಾವಿ ಪ್ರದೇಶದಲ್ಲಿ ಸಲೀಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೊದಲು ಸಲೀಂ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ರೀತಿ ಸ್ಟೇಟಸ್ ಹಾಕಿದ್ದು, ಆತನ ಸ್ನೇಹಿತರು ಬುದ್ಧಿ ಹೇಳಿ ಡಿಲೀಟ್ ಮಾಡಿಸಿದ್ದರು. ಪವಿತ್ರ ರಂಜಾನ್ ತಿಂಗಳಲ್ಲಿ ಇಂತಹ ಕೆಲಸ ಮಾಡಬೇಡ, ನೀನು ಮಾಡುವ ಕೆಲಸದಿಂದ ಹಬ್ಬದ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂದು ಬುದ್ಧಿ ಹೇಳಿದ್ದರು. ಆದರೂ, ಬುದ್ದಿ ಕಲಿಯದ ಸಲೀಂ ಮತ್ತೆ ಅದೇ ರೀತಿಯ ಸ್ಟೇಟಸ್ ಹಾಕಿದ್ದ.
ಆತನನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾಗಿರಿ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಆತನ ತಾಯಿ, ಸಹೋದರ, ಪೊಲೀಸರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರೊಂದಿಗೆ ವಾದ ಮಾಡಿದ್ದಾರೆ. ಹಿಂದೂಪರ ಸಂಘಟನೆ ಕಾರ್ಯಕರ್ತರ ದೂರಿನ ಮೇರೆಗೆ ಸಲೀಂ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.