
ವಿಜಯಪುರ: ಬಿಜೆಪಿಯಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯತ್ನಾಳ್ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಪಕ್ಷಕ್ಕೂ ಯತ್ನಾಳ್ ಗೂ ಸಂಬಂಧವಿಲ್ಲ. ಯತ್ನಾಳ್ ನಮ್ಮ ಪಕ್ಷಕ್ಕೆ ಬರಲು ಅರ್ಜಿ ಹಾಕಿಲ್ಲ ಎಂದರು.
ಯತ್ನಾಳ್ ಕಾಂಗ್ರೆಸ್ ಗೆ ಬರಲು ಅರ್ಜಿ ಹಾಕಿದರೂ ನಮ್ಮ ಪಕ್ಷಕ್ಕೆ ಬರಲು ಕಷ್ಟ ಇದೆ. ನಮ್ಮ ಪಕ್ಷದ ತತ್ವ, ಸಿದ್ಧಾಂತವೇ ಬೇರೆ. ಅವರು ಒಂದು ಧರ್ಮವನ್ನು ತೀರಾ ಅವಮಾನಿಸಿ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.