
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್(MSIL) ತನ್ನ ವಿವಿಧ ಉತ್ಪನ್ನಗಳ ಮಾರಾಟಕ್ಕಾಗಿ ಇ-ಕಾಮರ್ಸ್ ಪೋರ್ಟಲ್ ತೆರೆಯಲು ಸಿದ್ಧತೆ ನಡೆಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜೆಮ್ ಪೋರ್ಟಲ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ಹಾಗೂ ಖಾಸಗಿ ಒಡೆತನದ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಇದು ಉತ್ತಮ ವೇದಿಕೆಯಾಗಲಿದೆ. ಈ ಸಂಬಂಧ MSILನ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ವಿಸ್ತೃತವಾಗಿ ಚರ್ಚಿಸಿ ಇದೊಂದು ಉತ್ತಮ ಕಾರ್ಯವಾಗಿದ್ದು, ಯೋಜನೆ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೊದಲ ಹಂತದಲ್ಲಿ ಕೇವಲ ಎಂಎಸ್‌ಐಎಲ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಎರಡನೇ ಹಂತದಲ್ಲಿ ಮೈಸೂರು ಸ್ಯಾಂಡಲ್ ಸೋಪು, ಲಿಡ್ಕರ್ ಉತ್ಪನ್ನ, ಮೈಸೂರು ರೇಷ್ಮೆ ಬಟ್ಟೆ, ಕಾವೇರಿ ಎಂಪೋರಿಯಂ ಉತ್ಪನ್ನ, ನಂದಿನಿ ಉತ್ಪನ್ನ ಇತ್ಯಾದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇದರಲ್ಲಿ ಎಂಎಸ್‌ಎಂಇ ಉತ್ಪನ್ನಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೂ ವೇದಿಕೆ ಕಲ್ಪಿಸಲಾಗುವುದು. ಮೂರನೇ ಹಂತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ನಾಲ್ಕನೇ ಹಂತದಲ್ಲಿ ತಾಜಾ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಉದ್ದೇಶ ಇದೆ ಎಂದು ತಿಳಿಸಿದ್ದಾರೆ.