ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, ವಿವಿಧ ಕ್ಷೇತ್ರಗಳಿಗೆ ಪ್ರಮುಖ ಹಂಚಿಕೆಗಳನ್ನು ರೂಪಿಸಿದೆ. ಒಟ್ಟು ಬಜೆಟ್ 19,927.08 ಕೋಟಿ ರೂ.ಗಳಾಗಿದ್ದು, ಮೂಲಸೌಕರ್ಯ, ನಿರ್ವಹಣೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ನಿರ್ದೇಶಿಸಲಾಗಿದೆ.
ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ಮಂಡಿಸಿದ್ದಾರೆ. ಈಗಾಗಲೇ ನಗರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಪಿಜಿಯೋಥೆರಪಿ ಸೇವೆಯನ್ನು ಒದಗಿಸುತ್ತಿದ್ದು, ಹೆಚ್ಚುವರಿ 7 ಪಿಜಿಯೋಥೆರಪಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಂದಾಜು 633 ಕೋಟಿ ರೂ. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೈಗೊಳ್ಳಲು ಎ,ಬಿ,ಸಿ ಕಾರ್ಯಕ್ರಮದಡಿ ಪಾಲಿಕೆ ವ್ಯಾಪ್ತಿಯಲ್ಲಿ 1,80,000 ಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗುವುದು. ಪಾಲಿಕೆಯ 6 ವಲಯಗಳಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು.ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಅಂದಾಜು 7.5 ಕೋಟಿ ರೂ. ವೆಚ್ಚದಲ್ಲಿ ಹೊಸ ಎ, ಬಿ, ಸಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ನವೀಕೃತ ತಂತ್ರಜ್ಞಾನ ಬಳಸಿ ಕಸಾಯಿಖಾನೆಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಿಸಲು ಕ್ರಮ ವಹಿಸಲಾಗುವುದು. ಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಿಕೊಳ್ಳುವ ಮೂಲಕ ಬೀದಿನಾಯಿಗಳಿಗೆ ಆಹಾರ ನೀಡಲು ಕ್ರಮ ವಹಿಸಲಾಗುವುದು. ಕುಂಬಳಗೋಡು ಮತ್ತು ತಾವರಕೆರೆಯಲ್ಲಿ ಚಿತಾಗಾರಗಳನ್ನು ನಿರ್ಮಿಸಲಾಗುವುದು ಎಂದರು.
ವಿಸ್ತ್ರತ ಯೋಜನಾ ತಯಾರಿಕೆಗೆ ಟೆಂಡರ್ ಆಹ್ವಾನಿಸಲಾಗಿದ್ದು, ಈ ಯೋಜನೆಯಡಿ 19 ಆಸ್ಪತ್ರೆಗಳ ಒಟ್ಟಾರೆ 852 ಹಾಸಿಗೆಗಳನ್ನು 1122 ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. 26 ಹೊಸ ಕೇಂದ್ರಗಳಲ್ಲಿ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಬಿಬಿಎಂಪಿ ವತಿಯಿಂದ ಈಗಾಗಲೇ ನೇರವೇತನ ಪಾವತಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಪೈಕಿ 3673 ಮತ್ತು 11307 ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ.
ಕಂದಾಯ
2024-25ನೇ ಸಾಲಿನಲ್ಲಿ ಸುಮಾರು ರೂ.4900 ಕೋಟಿ ತೆರಿಗೆ ಸಂಗ್ರಹಿಸುವುದರೊಂದಿಗೆ ಸತತ ಎರಡನೇ ವರ್ಷವೂ ಭಾರತದಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ..
2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ ಮತ್ತು ಇತರೇ ಕಂದಾಯ ಸ್ವೀಕೃತಿ ರೂಪದಲ್ಲಿ ರೂ.5716 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆ ಪಾವತಿಯ ಮುಖ್ಯವಾಹಿನಿಗೆ ಸೇರಲು, ಲಕ್ಷಾಂತರ ಜನರ ಭಾಗವಹಿಸುವಿಕೆಗೆ ಐತಿಹಾಸಿಕ ಅವಕಾಶ ನೀಡಿ, ಪಾಲಿಕೆ ಮತ್ತು ನಾಗರೀಕರಿಬ್ಬರಿಗೂ ಪ್ರಯೋಜನವಾಗುವಂತಹ ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ಸುಮಾರು 3 ಲಕ್ಷ ಆಸ್ತಿಗಳಿಂದ ರೂ.1277 ಕೋಟಿ ಬಾಕಿಯನ್ನು ವಸೂಲಿ ಮಾಡಲಾಗಿದೆ.
ಪಾಲಿಕೆಯು ತನ್ನ ಎಲ್ಲಾ 25 ಲಕ್ಷ ಕಾಗದರೂಪದ ಖಾತಾಗಳನ್ನು ಆನ್‌ಲೈನ್‌ನಲ್ಲಿ ಡಿಜಿಟಲೀಕರಣ ಗೊಳಿಸುವ ಮೂಲಕ ಸಂಪರ್ಕ ರಹಿತ, ಮುಖರಹಿತ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರುವುದರೊಂದಿಗೆ ಮಾನ್ಯ ಉಪಮುಖ್ಯಮಂತ್ರಿಗಳು ನಾಗರೀಕರಿಗೆ ನೀಡಿದ್ದ ಭರವಸೆಯನ್ನು ಸಾಕಾರಗೊಳಿಸಿದೆ. ಇದು ಭಾರತದ ಅತಿ ದೊಡ್ಡ ಡಿಜಿಟಲ್ ಇ-ಖಾತಾ ವ್ಯವಸ್ಥೆಯಾಗಿರುತ್ತದೆ.
ಎಲ್ಲಾ ಪಾಲಿಕೆ ಆಸ್ತಿಗಳಿಗೆ ಜಿ.ಪಿ.ಎಸ್. ಸ್ಥಳಾಧಾರಿತ ಐ.ಡಿ.ಯನ್ನು ನೀಡಲಾಗುತ್ತಿದ್ದು, ಇದು ಪಾರದರ್ಶಕ ಮತ್ತು ಅಧಿಕೃತ ಇ-ಖಾತಾಗಳಿಗೆ ಕಾರಣವಾಗಿದೆ. ಅಂಗೈಯಲ್ಲೇ ಆಸ್ತಿ ದಾಖಲೆಗಳ ಲಭ್ಯತೆಯಿಂದಾಗಿ ನಾಗರೀಕರ ನೆಮ್ಮದಿ ಹೆಚ್ಚಿದೆ.
ಆಸ್ತಿಗಳು
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸುಮಾರು 20 ಲಕ್ಷ ಖಾಸಗಿ ಸ್ವತ್ತುಗಳು ಮತ್ತು 6,819 ಪಾಲಿಕೆ ಸ್ವತ್ತುಗಳ ಮೋಜಣಿಕಾರ್ಯ ಹಾಗೂ ದಾಖಲೆಗಳ ನಿರ್ವಹಣೆಗಾಗಿ ಪಾಲಿಕೆಯಲ್ಲಿ ಪ್ರತ್ಯೇಕವಾದ ಸರ್ವೆ ವಿಭಾಗವನ್ನು ಸ್ಥಾಪಿಸಲಾಗಿದೆ. ಇದರಿಂದ 2025-26ನೇ ಸಾಲಿನಲ್ಲಿ 228 ಆಸ್ತಿ ವಹಿಗಳನ್ನು ಸ್ಕ್ಯಾನಿಂಗ್ ಮತ್ತು ಡಿಜಿಟೈಸೇಷನ್ ಮಾಡಲು ಕ್ರಮವಹಿಸಲಾಗುವುದು.
ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಆಸ್ತಿಗಳ ನಿರ್ವಹಣೆ) ನಿಯಮಗಳು-2024ಕ್ಕೆ ಸರ್ಕಾರದ ಅನುಮೋದನೆ ದೊರಕಿದ್ದು ಹರಾಜಿನ ಮೂಲಕ ಗುತ್ತಿಗೆ ನೀಡಲು ಅಥವಾ ನವೀಕರಿಸಲು ಕ್ರಮವಹಿಸಲಾಗುವುದು. ಇದರಂತೆ ಗುತ್ತಿಗೆ/ಬಾಡಿಗೆ ಮೊತ್ತವನ್ನು ನಿಗಧಿಪಡಿಸುವುದರಿಂದ ಸುಮಾರು ರೂ.210 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.
ಜಾಹೀರಾತು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಹೀರಾತು ಉಪವಿಧಿಗಳು-2024ಕ್ಕೆ ಘನ ಸರ್ಕಾರವು ಅನುಮೋದನೆ ನೀಡಿರುತ್ತದೆ. ಹೊಸ ಜಾಹೀರಾತು ನೀತಿಯ ಅನುಷ್ಠಾನದಿಂದಾಗಿ ಈ ಸಾಲಿನಲ್ಲಿ ಸುಮಾರು ರೂ.750 ಕೋಟಿ ಆದಾಯವನ್ನು ಸಂಗ್ರಹಿಸುವ ನಿರೀಕ್ಷೆಯಿದೆ.
ಭೂ-ಸ್ವಾಧೀನ ಮತ್ತುಇ-ಡಿ.ಆರ್.ಸಿ./ಇ-ಟಿ.ಡಿ.ಆರ್.
ಪಾಲಿಕೆಯ ಮೂಲಸೌಕರ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಈ ಆರ್ಥಿಕ ವರ್ಷದಲ್ಲಿ ಭೂ-ಸ್ವಾಧೀನಕ್ಕೆ ರೂ.100 ಕೋಟಿಗಳನ್ನು ಮೀಸಲಿರಿಸಿದೆ.









