
ಬೆಂಗಳೂರು: ಬಗರ್ ಹುಕುಂ ಯೋಜನೆಯಡಿ ಅರ್ಹ ರೈತರಿಗೆ ಭೂ ಮಂಜೂರು ಮಾಡುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಆರು ತಿಂಗಳಲ್ಲಿ ಎಲ್ಲಾ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು ಎಂದು ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ತಹಶಿಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಬಗರ್ ಹುಕುಂ ಬಡವರ ಕೆಲಸವೆಂದು ಕೆಲವು ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ. 15 ದಿನಗಳಿಗೊಮ್ಮೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ತಮ್ಮ ಪಾಲಿನ ಜಮೀನು ಇದ್ದರೂ ಫೋಡಿಯಾಗದೆ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ದಾಖಲೆಯನ್ನು ಸಿದ್ಧಪಡಿಸಿ ಮುಂದಿನ ಹಂತದ ನಮೂನೆಗೆ ಭೂಮಾನ ಇಲಾಖೆಗೆ ಕಡತ ಕಳಿಸಬೇಕು ಎಂದು ಹೇಳಿದ್ದಾರೆ.