
ಬೆಂಗಳೂರು: ರಕ್ತದಲ್ಲಿನ ಸಕ್ಕರೆ ಪ್ರಮಾಣ ತಿಳಿಯಲು ಸೂಜಿ ಚುಚ್ಚುವ ಸಾಂಪ್ರದಾಯಿಕ ಮಾರ್ಗಕ್ಕೆ ಬದಲಾಗಿ ನೋವಿಲ್ಲದೆ ಅಂಗಾಂಶಕ್ಕೆ ಹಾನಿ ಮಾಡದೆ ಫೋಟೋ ಅಕೂಸ್ಟಿಕ್ ಸೆನ್ಸಿಂಗ್ ನಿಂದ ಸಕ್ಕರೆ ಪ್ರಮಾಣ ಅಳೆಯುವ ಸಂಶೋಧನೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಇನ್ಸ್ಟ್ರುಮೆಂಟೇಶನ್ ಅಂಡ್ ಅಪ್ಲೈಡ್ ಫಿಸಿಕ್ಸ್ ವಿಭಾಗ ಸಾಧ್ಯವಾಗಿಸಿದೆ.
ಈ ಕುರಿತಾದ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಮಧುಮೇಹಿಗಳ ಸಕ್ಕರೆ ಪ್ರಮಾಣ ತಿಳಿಯಲು ಆಗಾಗ ಸಣ್ಣ ಸೂಜಿ ಚುಚ್ಚುವುದರಿಂದ ಅವರಿಗೆ ನೋವು, ಅನಾನುಕೂಲ ಜೊತೆಗೆ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
ಫೋಟೋ ಅಕೂಸ್ಟಿಕ್ ಸೆನ್ಸಿಂಗ್ ನಿಂದ ತಂತ್ರ ಬಳಸಿ ಅಂಗಾಂಶದ ಮೇಲೆ ಲೇಸರ್ ಕಿರಣಗಳನ್ನು ಬಿಡಲಾಗುತ್ತದೆ. 1 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಬಿಸಿಯಾಗಿ ಕಂಪನ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ ಆಲ್ಟ್ರಾಸಾನಿಕ್ ಸೌಂಡ್ ವೇವ್ಸ್ ಗಳನ್ನು ಸೂಕ್ಷ್ಮ ಸೆನ್ಸಾರ್ ಗಳು ಸೆರೆ ಹಿಡಿಯುತ್ತವೆ. ಲೇಸರ್ ಕಿರಣಗಳನ್ನು ಬಿಟ್ಟಾಗ ಅಂಗಾಂಶದೊಳಗಿನ ಬೇರೆ ಬೇರೆ ಅಣುಗಳು ಮತ್ತು ಅಂಶಗಳು ಬೇರೆ ಬೇರೆ ರೀತಿಯಲ್ಲಿ ಧ್ವನಿ ತರಂಗ ರೂಪದಲ್ಲಿ ಪ್ರತಿಕ್ರಿಯಿಸುತ್ತದೆ. ಈ ಫಲಿತಾಂಶದ ಆಧಾರದ ಮೇಲೆ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಂಡುಹಿಡಿಯಬಹುದಾಗಿದೆ. ಈ ತಂತ್ರದಲ್ಲಿ ಅಂಗಾಂಶಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಇನ್ಸ್ಟ್ರುಮೆಂಟೇಶನ್ ಅಂಡ್ ಅಪ್ಲೈಡ್ ಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಯಪ್ರಕಾಶ್ ಹೇಳಿದ್ದಾರೆ.