ಸ್ವಂತದ್ದೊಂದು ಮನೆ ಮಾಡಬೇಕು ಅಂದ್ರೆ ಈಗ ಲಕ್ಷಗಟ್ಟಲೆ ಹಣ ಬೇಕು. ಹಾಗಾಗಿ ಎಲ್ರೂ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಗೃಹ ಸಾಲ ಪಡೆಯೋದು ಅನಿವಾರ್ಯ. ಬಡ್ಡಿ ದರ ಕೂಡ ಕಡಿಮೆಯಾಗಿರೋದ್ರಿಂದ ಈಗ ಹೋಮ್ ಲೋನ್ ಅಗ್ಗವಾಗಿದೆ. ಎಲ್ಲಾ ಪ್ರಕ್ರಿಯೆಗಳು ಆನ್ ಲೈನ್ ನಲ್ಲೇ ನಡೆಯೋದ್ರಿಂದ ಬಹುಬೇಗ ಸಾಲ ನಿಮ್ಮ ಕೈಗೆ ಸಿಗುತ್ತದೆ. ಆದ್ರೆ ಸಾಲ ಪಡೆಯುವ ಮುನ್ನ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಆಸ್ತಿಯ ಕಾನೂನು ಬದ್ಧತೆ : ಯಾವುದಾದ್ರೂ ಆಸ್ತಿ ಖರೀದಿಸುವ ಮುನ್ನ, ಆ ಬಿಲ್ಡರ್ ಬಗ್ಗೆ ತಿಳಿದುಕೊಳ್ಳಿ. ಆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ಸರಿಯಾಗಿವೆಯಾ ಅನ್ನೋದನ್ನು ಪರಿಶೀಲಿಸಿ. ಆನ್ ಲೈನ್ ನಲ್ಲೇ RERA ವೆಬ್ ಸೈಟ್ ನಲ್ಲಿ ನೀವು ಬಿಲ್ಡರ್ ಪ್ರೊಫೈಲ್ ನೋಡಬಹುದು. ಅಪ್ರೂವಲ್ ಲಿಸ್ಟ್ ನಲ್ಲಿ ಬಿಲ್ಡರ್ ಹೆಸರಿಲ್ಲದೇ ಇದ್ರೆ ಬ್ಯಾಂಕ್ ಗಳು ಸಾಲ ಕೊಡಲು ಒಪ್ಪುವುದಿಲ್ಲ.
ಡೌನ್ ಪೇಮೆಂಟ್ : ಮನೆ ಹುಡುಕಾಟಕ್ಕೂ ಮೊದಲು ನಿಮ್ಮ ಬಜೆಟ್ ಎಷ್ಟು ಅನ್ನೋದನ್ನು ನಿರ್ಧರಿಸಿ. ಡೌನ್ ಪೇಮೆಂಟ್ ಎಷ್ಟು ಪಾವತಿಸಬೇಕಾಗುತ್ತದೆ ಅನ್ನೋದನ್ನು ಲೆಕ್ಕ ಹಾಕಿ. ಸಾಮಾನ್ಯವಾಗಿ ಅದು ಆಸ್ತಿ ಮೌಲ್ಯದ ಶೇ.20 ರಷ್ಟಿರುತ್ತದೆ. ಸಾಧ್ಯ ಅಂತಾದ್ರೆ ಹೆಚ್ಚು ಮೊತ್ತವನ್ನು ಕೂಡ ಪಾವತಿಸಬಹುದು. ಕಡಿಮೆ ಬಿದ್ರೆ ಯಾರ ಬಳಿಯಾದ್ರೂ ಸಾಲ ಪಡೆಯಬಹುದು.
ನಿಮ್ಮ ಅರ್ಹತಾ ಮಾನದಂಡ ಪರಿಶೀಲಿಸಿ : ಗೃಹ ಸಾಲ ನೀಡುವವರು ಕೆಲವೊಂದು ಮಾನದಂಡಗಳನ್ನು ವಿಧಿಸುತ್ತಾರೆ. ಅದಕ್ಕೆ ಹೊಂದಿಕೆಯಾದಲ್ಲಿ ಮಾತ್ರ ನಿಮಗೆ ಸಾಲ ನೀಡುತ್ತಾರೆ. ನಿಮ್ಮ ಕ್ರೆಡಿಟ್ ಹಿಸ್ಟರಿ ಪರಿಶೀಲಿಸುತ್ತಾರೆ. ವಯಸ್ಸು, ಆದಾಯ, ಉದ್ಯೋಗ ಇವೆಲ್ಲವೂ ಪ್ರಮುಖವಾಗಿರುತ್ತವೆ.
ಸಾಲಕ್ಕೆ ಸಂಬಂಧಿಸಿದ ಇತರೆ ಶುಲ್ಕಗಳನ್ನು ಪರಿಶೀಲಿಸಿ : ಗೃಹ ಸಾಲಕ್ಕೆ ಇತರ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ. ಪ್ರೊಸೆಸಿಂಗ್ ಫೀ ಸರ್ವೇಸಾಮಾನ್ಯ. ಅರ್ಜಿ ಹಾಕುವ ಸಮಯದಲ್ಲೇ ಅದನ್ನು ಪಾವತಿಸಬೇಕು. ಶುಲ್ಕ ತುಂಬಾನೇ ದುಬಾರಿಯಾಗಿದ್ಯಾ ಅನ್ನೋದನ್ನು ಚೆಕ್ ಮಾಡಿಕೊಳ್ಳಿ.
ಬಡ್ಡಿದರ ಪರಿಶೀಲಿಸಿ : ಇದು ಎಲ್ಲಕ್ಕಿಂತ ಮುಖ್ಯವಾದದ್ದು. ಸಾಲದ ಬಡ್ಡಿದರ ತಿಳಿಯುವುದು ಅತ್ಯಂತ ಅವಶ್ಯಕ. ಯಾಕಂದ್ರೆ ಬಡ್ಡಿ ಹೆಚ್ಚಾದ್ರೆ ಇಎಂಐ ಕೂಡ ಜಾಸ್ತಿಯಾಗುತ್ತದೆ. ಫಿಕ್ಸೆಡ್ ಹಾಗೂ ಫ್ಲೋಟೆಡ್ ಇಂಟ್ರೆಸ್ಟ್ ರೇಟ್ ಮೇಲೆ ಗೃಹ ಸಾಲ ನೀಡಲಾಗುತ್ತದೆ.
ಇನ್ಷೂರೆನ್ಸ್ ಪಾಲಿಸಿ ಖರೀದಿಸಿ: ನೀವು ಸಾಲ ಮಾಡಿದ್ರೆ ಸಹಜವಾಗಿಯೇ ಖರ್ಚಿನ ಹೊರೆ ಜಾಸ್ತಿಯಾಗುತ್ತದೆ. ಹಾಗಾಗಿ ಹೋಮ್ ಲೋನ್ ಪಡೆಯುವಾಗ್ಲೇ ಅಡಮಾನ ವಿಮೋಚನೆ ವಿಮಾ ಪಾಲಿಸಿ ಖರೀದಿಸಿ. ಇದರಿಂದ ಲೋನ್ ಮರುಪಾವತಿ ಮೊತ್ತ ಕಡಿಮೆಯಾಗುತ್ತದೆ.