ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೊಟಾ ಮುಂಜಿಯಾಸರ್ ಪ್ರಾಥಮಿಕ ಶಾಲೆಯ 5 ರಿಂದ 7 ನೇ ತರಗತಿಯ ಸುಮಾರು 25 ವಿದ್ಯಾರ್ಥಿಗಳು ‘Dare or Pay’ ಆಟದಲ್ಲಿ ಭಾಗವಹಿಸಿ, ಪೆನ್ಸಿಲ್ ಶಾರ್ಪನರ್‌ನ ಬ್ಲೇಡ್‌ನಿಂದ ತಮ್ಮ ಕೈಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪರಸ್ಪರ ‘Dare or Pay’ ಎಂಬ ಆಟ ಆಡುತ್ತಿದ್ದರು. ಇದರಲ್ಲಿ, ತಮ್ಮನ್ನು ತಾವು ಗಾಯಗೊಳಿಸಿಕೊಳ್ಳಬೇಕು ಅಥವಾ 10 ರೂಪಾಯಿ ದಂಡ ಕಟ್ಟಬೇಕು ಎಂದು ಸವಾಲು ಹಾಕಿಕೊಳ್ಳುತ್ತಿದ್ದರು. ಈ ಆಟದಲ್ಲಿ ಭಾಗವಹಿಸಿದ ಸುಮಾರು 25 ವಿದ್ಯಾರ್ಥಿಗಳು ತಮ್ಮ ಕೈಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಯವೀರ್ ಗಢ್ವಿ ತಿಳಿಸಿದ್ದಾರೆ.
ಈ ಘಟನೆಗೆ ಯಾವುದೇ ಅಪರಾಧ ಉದ್ದೇಶ ಕಂಡುಬಂದಿಲ್ಲ. ಆದರೆ, ಯಾವುದೇ ಅಪರಾಧ ಕೃತ್ಯ ಬೆಳಕಿಗೆ ಬಂದರೆ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಗಢ್ವಿ ಹೇಳಿದ್ದಾರೆ. ಈ ಘಟನೆ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ತಂಡ ಶಾಲೆಗೆ ಭೇಟಿ ನೀಡಿ, ಪೋಷಕರ ಹೇಳಿಕೆಗಳನ್ನು ದಾಖಲಿಸಿದೆ. ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಲು ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಮಾಲೋಚನೆ ನೀಡಲಾಗುವುದು ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಿಶೋರ್ ಮಿಯಾನಿ ಹೇಳಿದ್ದಾರೆ.
ಈ ಘಟನೆಗೆ ಕಾರಣವಾದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಲಾಗುವುದು. ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಮೂಲ ಅಥವಾ ಅಂಶವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅವರು ಹೀಗೆ ಮಾಡಲು ಪ್ರೇರೇಪಿಸಿದ್ದು ಏನು ಎಂದು ತಿಳಿಯಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.