
ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಈ ಕುರಿತಾದ ಷರತ್ತು ಮತ್ತು ನಿಬಂಧನೆಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಸಚಿವ ಸಂಪುಟ ಸಭೆಯ ಒಪ್ಪಿಗೆಗೆ ಇಡಲಾಗುವುದು.
ವೇತನ ಆಯೋಗ ರಚನೆ ಅಂತಿಮ ಪ್ರಕ್ರಿಯೆಗೆ ಸಂಪುಟ ಸಭೆ ಒಪ್ಪಿಗೆಯ ಬೆನ್ನಲ್ಲೇ ನೋಟಿಸ್ ಹೊರ ಬೀಳಲಿದ್ದು, ಏಪ್ರಿಲ್ ನಿಂದಲೇ ಎಂಟನೇ ವೇತನ ಆಯೋಗ ಕಾರ್ಯ ಆರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಡುವೆ, 8ನೇ ವೇತನ ಆಯೋಗದ ಅನುಷ್ಠಾನದಿಂದ ಕೇಂದ್ರ ಸರ್ಕಾರಿ ನೌಕರರ ವೇತನ 14,000 ದಿಂದ 19,000 ರೂ.ವರೆಗೆ ಏರಿಕೆಯಾಗಲಿದೆ ಎಂದು ಅಮೆರಿಕದ ಅಂತರಾಷ್ಟ್ರೀಯ ಹೂಡಿಕೆ ಕಂಪನಿ ಗೋಲ್ಡ್ ಮನ್ ಸ್ಯಾಕ್ಸ್ ತಿಳಿಸಿದೆ.
50 ಲಕ್ಷ ಕೇಂದ್ರ ಸರ್ಕಾರಿ ನೌಕರರು, 65 ಲಕ್ಷ ಪಿಂಚಣಿದಾರರು ವೇತನ ಪರಿಷ್ಕರಣಿಯ ಪ್ರಯೋಜನ ಪಡೆಯಲಿದ್ದಾರೆ. 8ನೇ ವೇತನ ಆಯೋಗ ಏಪ್ರಿಲ್ ನಲ್ಲಿ ನೇಮಕವಾಗುವ ಸಾಧ್ಯತೆಯಿದ್ದು, 2026 -27ರಲ್ಲಿ ಆಯೋಗದ ಶಿಫಾರಸ್ಸುಗಳು ಜಾರಿ ಆಗುವ ಸಾಧ್ಯತೆ ಇದೆ.
ಈಗಾಗಲೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ಘೋಷಿಸಿದೆ, ಆದಾಗ್ಯೂ, ಇನ್ನೂ ಅಧ್ಯಕ್ಷರು ಮತ್ತು ಸದಸ್ಯರನ್ನು ನಿರ್ಧರಿಸಲಾಗಿಲ್ಲ. ನೌಕರರು ಮತ್ತು ನಿವೃತ್ತರು ವೇತನ ಬದಲಾವಣೆಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದರಲ್ಲಿ ಶೇ.100 ರಷ್ಟು ವೇತನ ಹೆಚ್ಚಳ ಮತ್ತು ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ(ಡಿಎ) ಏಕೀಕರಣದ ನಿರೀಕ್ಷೆಯೂ ಸೇರಿದೆ.
ರಾಷ್ಟ್ರೀಯ ಮಂಡಳಿ-ಜೆಸಿಎಂನ ಸಿಬ್ಬಂದಿ ಪಕ್ಷವು ಹೊಸ ವೇತನ ಆಯೋಗವು ತುಟ್ಟಿ ಭತ್ಯೆ(ಡಿಎ) ಅನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಷರತ್ತನ್ನು ಸೇರಿಸಬೇಕೆಂದು ವಿನಂತಿಸಿದೆ.
8 ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ಇನ್ನೂ ಹೆಸರಿಸಿಲ್ಲ. ಡಿಎ ವಿಲೀನ ಮತ್ತು ವೇತನ ಹೆಚ್ಚಳದಂತಹ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.