
ತುಮಕೂರು: 4 ವರ್ಷದ ಮಗುವನ್ನು ಹತ್ಯೆಗೈದ ಮಲತಂದೆ ಹಾವು ಕಚ್ಚಿ ಮಗು ಸಾವನ್ನಪ್ಪಿದೆ ಎಂದು ಕಥೆ ಕಟ್ಟಿ ಸುಳ್ಳು ಹೇಳಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರಿನ ಸಿದ್ದಲಿಂಗಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಗುವಿನ ಮಲತಂದೆ ಚಂದ್ರಶೇಖರ್ (24) 4 ವರ್ಶದ ಮಗು ಹಾವುಕಚ್ಚಿ ಸಾವನ್ನಪ್ಪಿದೆ ಎಂದು ಹೇಳಿದ್ದ. ಆದರೆ ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೋದಿಂದಾಗಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ ತನಿಖೆ ನಡೆಸಿದಾಗ ಮಲತಂದೆಯೇ ಮಗುವನ್ನು ಹತ್ಯೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಂದ್ರಶೇಖರ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಚಂದ್ರಶೇಖರ್ ಚಾಮರಾಜನಗರ ಮೂಲದವನು. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯಾ ಅಶೋಕ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಗರ್ಭಿಣಿಯಾಗಿದ್ದಾಗ ಪತಿಯನ್ನು ಬಿಟ್ಟು ಚಂದ್ರಶೇಖರ್ ಜೊತೆ ಓಡಿಹೋಗಿದ್ದಳು. ಬಳಿಕ ಮಗುವಿಗೆ ಜನ್ಮ ನೀಡಿದ್ದಳು.
ಮಗು ವಿಚಾರವಾಗಿ ಚಂದ್ರಶೇಖರ್ ಹಾಗೂ ಕಾವ್ಯಾ ನಡುವೆ ಜಗಳವಾಗಿ ಆಗಾಗ ಗಲಾತೆಯಾಗುತ್ತಿತ್ತು. ಮಾ.20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದ ವೇಳೆ ಮಗು ಮಿಥುನ್ ಮೇಲೆ ಚಂದ್ರಶೇಖರ್ ಹಲ್ಲೆ ನಡೆಸಿದ್ದಾನೆ ಪ್ರಜ್ಞೆ ತಪ್ಪಿದ ಮಗು ಸಾವನ್ನಪ್ಪಿದೆ. ಮಗು ಹಾವು ಕಚ್ಚಿ ಸಾವನ್ನಪ್ಪಿದೆ ಎಂದು ಕಥೆ ಕಟ್ಟಿದ್ದಾನೆ. ಅಂತ್ಯಕ್ರಿಯೆ ವೇಳೆ ಗ್ರಾಮಸ್ಥರೊಬ್ಬರು ಫೋಟೋ ತೆಗೆದಿದ್ದು, ಇದನ್ನು ಪರಿಶೀಲಿಸಿದಾಗ ಮಗು ಸಾವಿನ ಬಗ್ಗೆ ಅನುಮಾನ ಬಂದಿದೆ. ಗ್ರಾಮಸ್ಥರು ಚಂದ್ರಶೇಖರ್ ನನ್ನು ಪ್ರಶ್ನಿಸಿದಾಗ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಚಂದ್ರಶೇಖರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.