ಬೆಂಗಳೂರು : ಪಂಚಾಯತಿಗಳ ಅರಿವು ಕೇಂದ್ರಗಳಲ್ಲಿ ಮಾರ್ಚ್ ತಿಂಗಳ ʼಓದುವ ಬೆಳಕುʼ ಕಾರ್ಯಕ್ರಮದಡಿ ಮಾರ್ಚ್ 21ರಂದು ‘ವಿಶ್ವ ಜಲ ದಿನ’ದ ಅಂಗವಾಗಿ ನೀರಿನ ಮಹತ್ವ, ಮಿತ ಬಳಕೆ ಮತ್ತು ಸಂರಕ್ಷಣೆ, ಮಳೆ ನೀರು ಕೊಯ್ದು ಹಾಗೂ ಸಂಗ್ರಹಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ವಿಧಾನ, ನೀರಿನ ಮೂಲಗಳು ಹಾಗೂ ನೀರಿನ ಕೊಳವೆ ಮಾರ್ಗಗಳ ಸುರಕ್ಷತೆ, ಕೈಪಂಪ್ ಕೊಳವೆ ಬಾವಿ ಸುತ್ತ ಹಾಗೂ ಕಿರುನೀರು ಸರಬರಾಜು ಯೋಜನೆಗಳ ತೊಂಬೆಗಳ ಸುತ್ತ ನೈರ್ಮಲ್ಯ ಕಾಪಾಡುವಿಕೆ, ನೀರಿನ ಮೂಲದ ಪುನಶ್ಚೇತನ ಮತ್ತು ಮಳೆ ನೀರು ಸಂಗ್ರಹಣೆ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಪೂರೈಕೆ ಕುರಿತು ಗ್ರಾಮಗಳಲ್ಲಿ ಮಕ್ಕಳಿಗೆ ಕ್ಷೇತ್ರ ಭೇಟಿ ವ್ಯವಸ್ಥೆ ಮಾಡಿಸುವಂತೆ ತಿಳಿಸಲಾಗಿದೆ ಎಂದರು.
ಮಾರ್ಚ್ 21ರಂದು ‘ವಿಶ್ವ ಅರಣ್ಯ ದಿನʼ ನಡೆಯಲಿದ್ದು, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಿಂದ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸುವುದು ಹಾಗೂ ಪ್ರತಿ ಮಕ್ಕಳೂ ಒಂದೊಂದು ಸಸಿ ನೆಟ್ಟು ಆ ಸಸಿಗಳನ್ನು ದತ್ತು ತೆಗೆದುಕೊಂಡು, ನೀರುಣಿಸಿ ಕಾಪಾಡುವಂತೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.