
ಬೆಂಗಳೂರು: ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆ ನಡೆಸಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮಾರ್ಚ್ 18ರಂದು ಸಂಜೆ 5:30ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆ ನಿಲ್ಲಿಸುವಂತೆ ಶೇಷಾದ್ರಿಪುರಂ ಪೊಲೀಸರು ನೀಡಿದ್ದ ನೋಟಿಸ್ ಕುರಿತಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ.
ಮಂಗಳವಾರ ಸಂಜೆ ಕರೆಯಲಾಗಿದ್ದ ಸಮಾಲೋಚನಾ ಸಭೆಯ ಸಂಚಾಲಕರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯ್ ಭಾಸ್ಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಪೊಲೀಸರು ಮತ್ತು ಸರ್ಕಾರ ಸಭೆ, ಪ್ರತಿಭಟನೆಯನ್ನು ತಡೆಯುವಂತಿಲ್ಲ. ಆದರೆ, ಕಾನೂನು ಉಲ್ಲಂಘನೆಯಾದಲ್ಲಿ ಮಾತ್ರ ಪೊಲೀಸರು ಕ್ರಮ ಕೈಗೊಳ್ಳಬಹುದು. ಊಹೆಯ ಆಧಾರದಲ್ಲಿ ಪ್ರತಿಭಟನೆ ತಡೆಯುವಂತಿಲ್ಲ ಎಂದು ಆದೇಶಿಸಿದ್ದಾರೆ.