
ಬೆಂಗಳೂರು: ರಾಜ್ಯದ 65 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 3101.91 ಕೋಟಿ ರೂಪಾಯಿ ಬಾಕಿ ಇದ್ದು, ಶೀಘ್ರದಲ್ಲೇ ಹಣ ಪಾವತಿಸುವಂತೆ 33 ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು, ರೈತರ ಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು, ರಾಜ್ಯದಲ್ಲಿ 99 ಸರ್ಕಾರಿ ಕಾರ್ಖಾನೆಗಳಿವೆ. ಅದರಲ್ಲಿ 79 ಕಾರ್ಖಾನೆಗಳು ಕಾರ್ಯನಿರತವಾಗಿವೆ. 2024- 25 ನೇ ಹಂಗಾಮಿನಲ್ಲಿ 2025ರ ಫೆಬ್ರವರಿ 28ರ ಅಂತ್ಯಕ್ಕೆ ಕಬ್ಬು ಪೂರೈಕೆ ಮಾಡಿದ ರೈತರಿಗೆ 17,596.92 ಕೋಟಿ ರೂ. ಬಿಲ್ ಪಾವತಿಸಬೇಕಿತ್ತು, ಅದರಲ್ಲಿ 14,655.91 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಲಾಗಿದೆ. ವಿಳಂಬ ಮಾಡಿರುವ ಕಾರ್ಖಾನೆಗಳು ವಿಳಂಬದ ದಿನಗಳನ್ನು ಲೆಕ್ಕ ಹಾಕಿ ಶೇ. 15 ರಷ್ಟು ಬಡ್ಡಿಯನ್ನು ರೈತರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.