
ಬೆಳಗಾವಿ: ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಬುರ್ಖಾ ಹೋಲುವ ಬಟ್ಟೆ ಧರಿಸಿ ಅಸಭ್ಯವಾಗಿ ವರ್ತಿಸುವ ಮೂಲಕ ಇಸ್ಲಾಮಿಕ್ ಉಡುಗೆಗೆ ಅವಮಾನ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಾರ್ಚ್ 14ರಂದು ನಡೆದ ಹೋಳಿ ಹಬ್ಬದ ವೇಳೆ ಕೆಲವು ವ್ಯಕ್ತಿಗಳು ಹಿಜಾಬ್ ಧರಿಸಿ ಉದ್ದೇಶಪೂರ್ವಕವಾಗಿ ಅನುಚಿತ ನೃತ್ಯ ಮಾಡಿದ್ದಾರೆ. ಇದರಿಂದ ಇಸ್ಲಾಮಿಕ್ ಉಡುಪಿನ ಪಾವಿತ್ರವನ್ನು ಅವಮಾನಿಸಿದಂತಾಗಿದೆ. ಶಾಂತಿ ಮತ್ತು ಘನತೆಗೆ ಧಕ್ಕೆಯಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ನಗರ ಘಟಕದ ಅಧ್ಯಕ್ಷ ರಿಜ್ವಾನ್ ಅತ್ತಾರ್ ದೂರು ನೀಡಿದ್ದಾರೆ.