
ಅಮೆರಿಕಾದ ಮಧ್ಯಭಾಗದಲ್ಲಿ ಶನಿವಾರ ಅಪ್ಪಳಿಸಿದ ಭೀಕರ ಚಂಡಮಾರುತ ಮತ್ತು ಸುಂಟರಗಾಳಿಯಿಂದಾಗಿ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರಂತದಿಂದ ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ದೊಡ್ಡ ಟ್ರಕ್‌ಗಳು ಪಲ್ಟಿಯಾಗಿವೆ. ಮುಂಬರುವ ವಾರಾಂತ್ಯದಲ್ಲಿ ಇನ್ನಷ್ಟು ಸುಂಟರಗಾಳಿಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮಿಸೌರಿ ರಾಜ್ಯದಲ್ಲಿ ಮರಗಳು ಮತ್ತು ವಿದ್ಯುತ್ ತಂತಿಗಳು ಧರೆಗುರುಳಿದ್ದು, ಕಟ್ಟಡಗಳು ಹಾನಿಗೊಳಗಾಗಿವೆ. ಕೆಲವು ಪ್ರದೇಶಗಳಲ್ಲಿ ಸುಂಟರಗಾಳಿ, ಗುಡುಗು ಮತ್ತು ಆಲಿಕಲ್ಲು ಮಳೆಯಿಂದ ತೀವ್ರ ಹಾನಿಯಾಗಿದೆ. ಅರ್ಕಾನ್ಸಾಸ್ ಗವರ್ನರ್ ಸಾರಾ ಹಕಾಬೀ ಸ್ಯಾಂಡರ್ಸ್ ತುರ್ತು ಪರಿಸ್ಥಿತಿ ಘೋಷಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಾಯದ ಭರವಸೆ ನೀಡಿದ್ದಾರೆ.
ಶನಿವಾರ ಸಂಜೆಯ ವೇಳೆಗೆ ಅಮೆರಿಕಾದ ಮಧ್ಯಭಾಗದಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿದೆ. ಮಿಸಿಸಿಪ್ಪಿ ಮತ್ತು ಟೆನ್ನೆಸ್ಸೀ ಸೇರಿದಂತೆ ಗಲ್ಫ್ ಕರಾವಳಿ ರಾಜ್ಯಗಳಲ್ಲಿ ಇನ್ನಷ್ಟು ಸುಂಟರಗಾಳಿಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಟೆಕ್ಸಾಸ್, ಒಕ್ಲಹೋಮ ಮತ್ತು ಕನ್ಸಾಸ್ ರಾಜ್ಯಗಳಲ್ಲಿ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ಅತ್ಯಂತ ಭೀಕರ ಸುಂಟರಗಾಳಿಗಳು ಸಂಭವಿಸುತ್ತವೆ. ಈ ಪ್ರದೇಶವನ್ನು “ಸುಂಟರಗಾಳಿ ಮಾರ್ಗ” ಎಂದು ಕರೆಯಲಾಗುತ್ತದೆ. ಇಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚು ಸುಂಟರಗಾಳಿಗಳು ಸಂಭವಿಸುತ್ತವೆ. 2024ರಲ್ಲಿ ಅಮೆರಿಕಾದಲ್ಲಿ ಸುಂಟರಗಾಳಿ ಸಂಬಂಧಿತ ಘಟನೆಗಳಲ್ಲಿ 54 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ ಸಂಸ್ಥೆ ತಿಳಿಸಿದೆ.
ರಾಜ್ಯವಾರು ಸಾವು-ನೋವಿನ ವಿವರ
- ಕನ್ಸಾಸ್‌ನಲ್ಲಿ ಭೀಕರ ಧೂಳಿನ ಬಿರುಗಾಳಿಯಿಂದಾಗಿ 50ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
- ಮಿಸೌರಿ ರಾಜ್ಯ ಹೆದ್ದಾರಿ ಪೊಲೀಸರು 12 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ಚಂಡಮಾರುತದಿಂದ ನಾಶವಾದ ದೋಣಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
- ಮಿಸಿಸಿಪ್ಪಿಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 3 ಮಂದಿ ನಾಪತ್ತೆಯಾಗಿದ್ದಾರೆ.
- ಟೆಕ್ಸಾಸ್‌ನಲ್ಲಿ ಧೂಳಿನ ಬಿರುಗಾಳಿ ಮತ್ತು ಬೆಂಕಿಯಿಂದ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾದ ಕಾರಣ ಸಂಭವಿಸಿದ ವಾಹನ ಅಪಘಾತಗಳಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ.
- ಅರ್ಕಾನ್ಸಾಸ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.