
ಚಿತ್ರದುರ್ಗ: ನಾಯಕನಹಟ್ಟಿ ಜಾತ್ರೆಯ ಕೇಂದ್ರ ಬಿಂದು ದೊಡ್ಡ ರಥವಾಗಿದ್ದು, ಪ್ರತಿ ವರ್ಷದಂತೆ ರಥ ಮತ್ತು ಬಾಬುದಾರರು ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಅಪಘಾತ ವಿಮೆಯನ್ನು ಮಾಡಿಸಲಾಗಿದ್ದು, ಗುರು ತಿಪ್ಪೇರುದ್ರಸ್ವಾಮಿ ರಥಕ್ಕೆ 2.50 ಕೋಟಿ ರೂ.ಮೊತ್ತದ ವಿಮಾ ಸೌಲಭ್ಯಗಳನ್ನು ಒದಗಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ದೊಡ್ಡರಥಕ್ಕೆ ಮತ್ತು ಚಿಕ್ಕರಥಕ್ಕೆ ದುರಸ್ಥಿ ಮಾಡಿಸಿ, ಸರ್ವೀಸಿಂಗ್ ಮಾಡಿ, ರಥೋತ್ಸವಕ್ಕೆ ಸಿದ್ಧಪಡಿಸಲಾಗಿದೆ. ಮಧ್ಯ ಕರ್ನಾಟಕದ ಭಾಗದ ಅತೀ ಎತ್ತರದ ಸುಮಾರು 200 ಟನ್ ತೂಕವಿರುವ ಈ ರಥವು 5 ಚಕ್ರಗಳನ್ನು ಹೊಂದಿದೆ. ರಥಕ್ಕೆ ಕಳೆದ ಎರಡು ದಿನಗಳಿಂದ ಬಣ್ಣಬಣ್ಣದ ಬಾವುಟಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದ್ದು, ರಥವನ್ನು ಎಳೆಯುವ 2 ಅಡಿ ಸುತ್ತಳತೆ ಇರುವ ನೂತನ ಮಿಣಿ(ಹಗ್ಗ)ಯನ್ನು ಪರೀಕ್ಷಿಸಲಾಗಿದೆ. ಆ ಮೂಲಕ ಜಾತ್ರೆಗೆ ರಥವನ್ನು ಎಲ್ಲಾ ಹಂತದಲ್ಲೂ ಸಿದ್ಧಗೊಳಿಸಲಾಗಿದೆ.
ನಾಯಕನಹಟ್ಟಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಯಾವುದೇ ತರಹದ ಕುಂದುಕೊರತೆ ಉಂಟಾಗದಂತೆ ಅಗತ್ಯವಾದ ಎಲ್ಲಾ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.