
ಧಾರವಾಡ: ಹಿರಿಯ ಸಾಹಿತಿ, ವಿದ್ವಾಂಸ ಡಾ. ಪಂಚಾಕ್ಷರಿ ಹಿರೇಮಠ(92) ನಿಧನರಾಗಿದ್ದಾರೆ. ಧಾರವಾಡದ ಜಯನಗರ ನಿವಾಸದಲ್ಲಿ ಪಂಚಾಕ್ಷರಿ ಹಿರೇಮಠ ನಿಧನರಾಗಿದ್ದಾರೆ.
ಕವಿ, ಕಥೆಗಾರ, ಪ್ರಬಂಧಕ, ವಿಮರ್ಶಕ, ಅನುವಾದಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ ವಿದ್ಯಾ ವಾಚಸ್ಪತಿ ಬಿರುದಾಂಕಿತ ವಿದ್ವಾಂಸರಾಗಿದ್ದರು. 19 ಕಾವ್ಯ, 11 ಕಥಾ ಸಂಕಲನಗಳನ್ನು ರಚಿಸಿದ್ದಾರೆ. 8 ಕಾದಂಬರಿಗಳನ್ನು ಉರ್ದು, ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 13 ಪ್ರಬಂಧ, 7 ಚಿಂತನಾ ಸಾಹಿತ್ಯ ಕೃತಿ, 6 ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. 3 ಪತ್ರ ಸಾಹಿತ್ಯ ಕೃತಿ, 7 ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 5 ಅನುವಾದಿತ ನಾಟಕ ಸೇರಿ ಸುಮಾರು 100ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ.
ಕನ್ನಡ, ಉರ್ದು, ಹಿಂದಿ, ತೆಲುಗು, ಇಂಗ್ಲಿಷ್ ಭಾಷೆಯನ್ನು ಕಲಿತಿದ್ದ ಅವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933ರ ಜನವರಿ 6ರಂದು ಜನಿಸಿದ್ದರು. ಕರ್ನಾಟಕ ವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧಾರವಾಡದ ಜಯನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಸ್ವಗ್ರಾಮ ಬಿಸರಳ್ಳಿಯಲ್ಲಿ ಹಿರೇಮಠ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸಿಎಂ ಸಂತಾಪ:
ಹಿರಿಯ ಸಾಹಿತಿ, ವಿದ್ವಾಂಸ, ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹಿರೇಮಠರ ಹೋರಾಟದ ಜೀವನ ಸಾಹಿತ್ಯದ ಸಾಧನೆಯನ್ನು ಮುಖ್ಯಮಂತ್ರಿಗಳು ಬಣ್ಣಿಸಿದ್ದಾರೆ. ಹೈದರಾಬಾದ್ -ಕರ್ನಾಟಕ ವಿಮೋಚನಾ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟ ಸ್ಮರಿಸಿ ನುಡಿ ನಮನ ಸಲ್ಲಿಸಿದ್ದಾರೆ. ಬಹುಭಾಷಾ ವಿದ್ವಾಂಸರಾಗಿದ್ದ ಡಾ. ಹಿರೇಮಠ ಅವರು ಕನ್ನಡಕ್ಕೆ ವಿವಿಧ ಭಾಷೆಯ ಕೃತಿಗಳನ್ನು ಅನುವಾದ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮೇರು ಸಾಹಿತಿಯಾಗಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.