
ಹಾವೇರಿ: ಹಾವೇರಿಯಲ್ಲಿ ನಡೆದಿದ್ದ ನರ್ಸ್ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನಯಾಜ್ ಎಂದು ಗುರುತಿಸಲಾಗಿದೆ. ಹತ್ಯೆಯಾದ ಯುವತಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (27). ಸ್ವಾತಿ ರಾಣೆಬೆನ್ನೂರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಮಾರ್ಚ್ 6ರಂದು ಸ್ವಾತಿ ಮೃತದೇಹ ರಾಣೆಬೆನ್ನೂರು ತಾಲೂಕಿನ ಪತ್ತೆಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿದೆ. ಮೊದಲು ಅಪರಿಚಿತ ಶವ ಎಂದು ಹಲಗೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ಗೊತ್ತಾಗಿದೆ. ಮಾರ್ಚ್ 3ರಂದು ನಾಪತ್ತೆಯಾಗಿದ್ದ ಸ್ವಾತಿ ಮಾರ್ಚ್ 6ರಂದು ಶವವಾಗಿ ಪತ್ತೆಯಾಗಿದ್ದಾಳೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಸ್ವಾತಿ ಪೋಷಕರು ಹಿರೇಕೇರೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದೀಗ ಸ್ವಾತಿ ಹತ್ಯೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬ್ಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.