ಚೆನ್ನೈನ ಅಣ್ಣಾ ನಗರದಲ್ಲಿ ವೈದ್ಯ ದಂಪತಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಡಾ. ಬಾಲಮುರುಗನ್, ಅವರ ಪತ್ನಿ ಸುಮತಿ, ಪುತ್ರರಾದ ಜಸ್ವಂತ್ ಕುಮಾರ್ ಮತ್ತು ಲಿಂಗೇಶ್ ಕುಮಾರ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಡಾ. ಬಾಲಮುರುಗನ್ ನಗರದಲ್ಲಿ ಹಲವು ಅಲ್ಟ್ರಾಸೌಂಡ್ ಕೇಂದ್ರಗಳನ್ನು ಹೊಂದಿದ್ದರು. ಆದರೆ, ಅವರು ಅಪಾರ ಸಾಲದ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಆರ್ಥಿಕ ಸಂಕಷ್ಟದಿಂದ ನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ ಡಾ. ಬಾಲಮುರುಗನ್ ಅವರ ಚಾಲಕ ಮನೆಗೆ ಬಂದಾಗ, ಯಾರೂ ಪ್ರತಿಕ್ರಿಯಿಸದ ಕಾರಣ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಟುಂಬವು ಆತ್ಮಹತ್ಯೆಗೂ ಮುನ್ನ ಯಾವುದೇ ಡೆತ್‌ನೋಟ್ ಬರೆದಿಟ್ಟಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.