
ನವದೆಹಲಿ: ಫೆಬ್ರವರಿ ಅವಧಿಯ ಚಿಲ್ಲರೆ ಹಣದುಬ್ಬರ 7 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಸುತ್ತಿನ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಮೂಡಿಸಿದೆ.
ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 3.61 ರಷ್ಟು ದಾಖಲಾಗಿದೆ. ಇದು ಬಡ್ಡಿ ದರ ನಿಗದಿಗೆ RBI ಪರಿಗಣಿಸುವ ಗರಿಷ್ಠ ಮಾನದಂಡಕ್ಕಿಂತಲೂ ಕಡಿಮೆಯಾಗಿದೆ. ಏಪ್ರಿಲ್ 9ರಂದು ನಡೆಯಲಿರುವ RBI ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶ ಸಭೆಯಲ್ಲಿ ರೆಪೊ ದರವನ್ನು ಶೇಕಡ 0.25 ರಷ್ಟು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೆಪೊ ದರ ಇಳಿಕೆಯಾದಲ್ಲಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲಿವೆ. ಇದರಿಂದ ಸಾಲಗಾರರಿಗೆ ಹೊರೆ ಕಡಿಮೆಯಾಗಲಿದೆ. ಪ್ರಸ್ತುತ ರೆಪೊ ದರ ಶೇಕಡ 6.25ರಷ್ಟು ಇದ್ದು, ಕಳೆದ ತಿಂಗಳು ಶೇಕಡ 0.25 ರಷ್ಟು ಇಳಿಕೆ ಮಾಡಲಾಗಿತ್ತು.