ಉತ್ತರ ಪ್ರದೇಶದ ಮಥುರಾದಲ್ಲಿ ಮಹಿಳೆ ವೇಷ ಧರಿಸಿದ ವ್ಯಕ್ತಿಯೊಬ್ಬ ಪ್ರೇಯಸಿ ತನ್ನ ಜೊತೆ ಓಡಿ ಹೋಗಲು ನಿರಾಕರಿಸಿದ್ದಕ್ಕೆ ಆಕೆಯ ಮನೆಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಮಂಗಳವಾರ ಮಧ್ಯಾಹ್ನ ಮಹಿಳೆಯ ಕಿರುಚಾಟ ಕೇಳಿ ನೆರೆಹೊರೆಯವರು ಆಕೆಯ ಮನೆಗೆ ಧಾವಿಸುತ್ತಿದ್ದಂತೆ ಆರೋಪಿ ಉಮೇಶ್ (28) ಟೆರೇಸ್ನಿಂದ ಜಿಗಿದು ಓಡಿಹೋಗಲು ಪ್ರಯತ್ನಿಸಿದಾಗ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇ.70 ಕ್ಕೂ ಹೆಚ್ಚು ಸುಟ್ಟ ಗಾಯಗಳಿಗೆ ಒಳಗಾದ ರೇಖಾ (30) ಮತ್ತು ಉಮೇಶ್ ಇಬ್ಬರೂ ಆಗ್ರಾದ ಎಸ್ಎನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೋಹ್ ಗ್ರಾಮದ ನಿವಾಸಿಯಾದ ರೇಖಾ ಘಟನೆ ನಡೆದಾಗ ಮನೆಯಲ್ಲಿ ಟಿವಿ ನೋಡುತ್ತಾ ಒಬ್ಬಂಟಿಯಾಗಿದ್ದು, ಆಕೆಯ ಏಳು ಮತ್ತು ಐದು ವರ್ಷ ವಯಸ್ಸಿನ ಮಕ್ಕಳು ಶಾಲೆಗೆ ಹೋಗಿದ್ದರು. ಆಕೆಯ ಪತಿ ಸಂಜು ಕೃಷಿ ಕಾರ್ಮಿಕನಾಗಿದ್ದು, ಕೆಲಸಕ್ಕೆ ಹೋಗಿದ್ದರು ಎಂದು ಫರಾ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಮಧ್ಯಾಹ್ನದ ಸುಮಾರಿಗೆ, ರೇಖಾನ ಅಕ್ಕನ ಗಂಡನ ಸಹೋದರನಾದ ಹರಿಯಾಣದ ಹಸನ್ಪುರ ಗ್ರಾಮದ ನಿವಾಸಿ ಉಮೇಶ್ ಪೆಟ್ರೋಲ್ ಬಾಟಲಿಯೊಂದಿಗೆ ಆಕೆಯ ಮನೆಗೆ ಬಂದಿದ್ದ.
“ಉಮೇಶ್ ಮಹಿಳೆಯಂತೆ ಕಾಣಲು ಲೆಹೆಂಗಾ ಧರಿಸಿದ್ದ ಮತ್ತು ಮೋಟಾರ್ಸೈಕಲ್ನಲ್ಲಿ ಸ್ನೇಹಿತನೊಬ್ಬ ಗ್ರಾಮದ ಬಳಿ ಅವನನ್ನು ಬಿಟ್ಟುಹೋಗಿದ್ದ. ಆರೋಪಿ ರೇಖಾಳ ಮನೆಯ ಟೆರೇಸ್ನಿಂದ ಒಳ ಪ್ರವೇಶಿಸಿ, ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಅವಳು ನಿರಾಕರಿಸಿದಾಗ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ” ಎಂದು ಪಾಂಡೆ ಹೇಳಿದರು.
ರೇಖಾ ಕಿರುಚಾಟದಿಂದ ಎಚ್ಚೆತ್ತ ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸಿದರು, ಉಮೇಶ್ ಟೆರೇಸ್ನಿಂದ ಜಿಗಿದು ಓಡಿಹೋಗಲು ಪ್ರಯತ್ನಿಸಿದನಾದರೂ, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಥಳಕ್ಕೆ ತಲುಪಿದ ನಂತರ, ಪೊಲೀಸರು ರೇಖಾ ಮತ್ತು ಉಮೇಶ್ ರನ್ನು ಫರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ, ಅವರನ್ನು ನಂತರ ಆಗ್ರಾದ ಎಸ್ಎನ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಉಮೇಶ್ ರೇಖಾಳ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಮತ್ತು ಅವರ ಸಂಬಂಧವು ಕಾಲಾನಂತರದಲ್ಲಿ ಬೆಳೆಯಿತು. ಕಳೆದ ವರ್ಷ ಆಗಸ್ಟ್ 31 ರಂದು, ರೇಖಾ ಅವನೊಂದಿಗೆ ಮನೆಯಿಂದ ಓಡಿ ಹೋಗಿದ್ದು, ಆಕೆಯ ಕುಟುಂಬವು ಪೊಲೀಸ್ ದೂರು ದಾಖಲಿಸಿ ಫೆಬ್ರವರಿ 10 ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಿಂದ ಆಕೆಯನ್ನು ವಾಪಸ್ ಕರೆತರಲಾಯಿತು” ಎಂದು ಪಾಂಡೆ ಹೇಳಿದರು.
“ಘಟನೆಯ ನಂತರ, ರೇಖಾ ತನ್ನ ತಪ್ಪನ್ನು ಅರಿತುಕೊಂಡು ಉಮೇಶ್ನಿಂದ ದೂರ ಸರಿದಿದ್ದು, ಈ ಕಾರಣಕ್ಕಾಗಿಯೇ ಆತನೊಂದಿಗೆ ಹೋಗಲು ನಿರಾಕರಿಸಿದಾಗ, ಅವನು ಕೋಪಗೊಂಡು ಆಕೆಯನ್ನು ಕೊಲ್ಲಲು ಪ್ರಯತ್ನಿಸಿದನು” ಎಂದು ಅಧಿಕಾರಿ ಹೇಳಿದರು.
ಪಾಂಡೆ ಅವರು ಈ ವಿಷಯದಲ್ಲಿ ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಹೇಳಿದ್ದು, “ದೂರು ಸ್ವೀಕರಿಸಿದ ನಂತರ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ, ಅವರ ಜೀವಗಳನ್ನು ಉಳಿಸುವುದು ಆದ್ಯತೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.