ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಒಂದು ಮಹತ್ವದ ತೀರ್ಪು ಕೊಟ್ಟಿದೆ. ತಮಿಳುನಾಡು ಸರ್ಕಾರಿ ಕೆಲಸ ಸಿಗಬೇಕಾದರೆ ತಮಿಳು ಓದೋಕೆ, ಬರೆಯೋಕೆ ಬರಲೇಬೇಕು ಅಂತಾ ಹೇಳಿದೆ. ತಮಿಳುನಾಡು ವಿದ್ಯುತ್ ಮಂಡಳಿಯ (TNEB) ಜೂನಿಯರ್ ಅಸಿಸ್ಟೆಂಟ್ ಒಬ್ಬರು ತಮಿಳು ಭಾಷಾ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದ್ದರು. ಅದನ್ನ ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದರು.
ಏನಾಯ್ತು ಪ್ರಕರಣ ?
ಎಂ. ಜಯಕುಮಾರ್ ಅಂತಾ ಒಬ್ಬರು ತಮಿಳುನಾಡು ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡ್ತಿದ್ದರು. ಅವರಿಗೆ ಎರಡು ವರ್ಷದೊಳಗೆ ತಮಿಳು ಭಾಷಾ ಪರೀಕ್ಷೆ ಪಾಸು ಮಾಡಬೇಕಾಗಿತ್ತು. ಆದರೆ, ಅವರು ಫೇಲ್ ಆಗಿದ್ದರಿಂದ ಅವರನ್ನ ಕೆಲಸದಿಂದ ಕಿತ್ತು ಹಾಕಿದ್ದರು. ಜಯಕುಮಾರ್ ಅವರ ತಂದೆ ನೌಕಾದಳದಲ್ಲಿದ್ದ ಕಾರಣಕ್ಕೆ ಅವರು ಸಿಬಿಎಸ್ಇ ಶಾಲೆಯಲ್ಲಿ ಓದಿದ್ದು, ತಮಿಳು ಭಾಷೆ ಕಲಿಯೋಕೆ ಆಗಲಿಲ್ಲ ಅಂತಾ ವಾದ ಮಾಡಿದ್ದರು.
ಕೋರ್ಟ್ ಏನ್ ಹೇಳಿತು ?
ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಆರ್. ಪೂರ್ಣಿಮಾ ಅವರು ಈ ಬಗ್ಗೆ ವಿಚಾರಣೆ ನಡೆಸಿ, “ಸರ್ಕಾರಿ ನೌಕರರಿಗೆ ತಮಿಳು ಗೊತ್ತಿಲ್ಲ ಅಂದ್ರೆ ಹೇಗೆ ? ಅವರು ದಿನನಿತ್ಯದ ಕೆಲಸಗಳನ್ನು ಹೇಗೆ ಮಾಡ್ತಾರೆ ? ಯಾವುದೇ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಆ ರಾಜ್ಯದ ಭಾಷೆ ಗೊತ್ತಿರಬೇಕು. ಇಲ್ಲದಿದ್ದರೆ ಹೇಗೆ ?” ಅಂತಾ ಪ್ರಶ್ನೆ ಮಾಡಿದ್ದಾರೆ.
ಭಾಷಾ ರಾಜಕೀಯದ ನಡುವೆ ಈ ತೀರ್ಪು
ಈ ತೀರ್ಪು ಭಾಷಾ ರಾಜಕೀಯದ ನಡುವೆ ಬಂದಿದೆ. ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನ ಹೇರಲು ಪ್ರಯತ್ನಿಸುತ್ತಿದೆ ಅಂತಾ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ವಿರೋಧಿಸಿ ಅವರು ಮಾತನಾಡಿದ್ದಾರೆ.