ಆಂಧ್ರ ಪ್ರದೇಶ : ಸಿನಿಮೀಯ ಶೈಲಿಯಲ್ಲಿ ಗನ್ ಸಮೇತ ಶಾಪಿಂಗ್ ಮಾಲ್ ಗೆ ನುಗ್ಗಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ನಗರದ ಗಾಂಧಿ ರೋಡ್ ನಲ್ಲಿ ನಡೆದಿದೆ.
ಚಿತ್ತೂರಿನ ಲಕ್ಷ್ಮಿ ಸಿನಿಮಾ ಹಾಲ್ ಬಳಿಯ ಪುಷ್ಪ ಕಿಡ್ ವರ್ಡ್ ಮಾಲ್ ನಲ್ಲಿ ಬೆಳಗ್ಗೆ 6:30 ಕ್ಕೆ ಈ ಘಟನೆ ನಡೆದಿದೆ. ಗನ್, ರಾಡ್ ಗಳ ಜೊತೆ ಮಾಲ್ ಗೆ ಬಂದ ದುಷ್ಕರ್ಮಿಗಳು ಮಾಲ್ ಮಾಲೀಕನ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ.
ಶಾಪಿಂಗ್ ಮಾಲ್ ಗೆ ನುಗ್ಗಿದ 6 ಮಂದಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ. ಮಾಲ್ ಮಾಲೀಕನ ಮೇಲೆ ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ. ಮಾಲೀಕನ ಕಿರುಚಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದು, ಆರು ಮಂದಿ ಪೈಕಿ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೂ ಮೂವರನ್ನು ಮಾಲ್ ನಲ್ಲೇ ಸ್ಥಳೀಯರು ಲಾಕ್ ಮಾಡಿದ್ದಾರೆ. ಮೂವರು ದರೋಡೆಕೋರರ ಬಳಿ ಗನ್ ಇದ್ದು, ಪೊಲೀಸರು ಮೂವರನ್ನು ಬಂಧಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.