
ಇತ್ತೀಚೆಗೆ ಬೆಂಗಳೂರಿನಲ್ಲಿ ಮದುವೆ ದಿನ ವರನೇ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಇಂತದ್ದೇ ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆದರೆ ಇಲ್ಲಿ ಮದುವೆ ಹಿಂದಿನ ದಿನ ವಧುವೇ ನಾಪತ್ತೆಯಾಗಿದ್ದಾಳೆ.
ಉತ್ತರ ಪ್ರದೇಶದ ಕಾಶಿನಗರದ ಖೆಡ್ಡಾದಲ್ಲಿ ಈ ಘಟನೆ ನಡೆದಿದೆ. ಪುಷ್ಪಾ ಹಾಗೂ ಮುಖೇಶ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ವಿವಾಹಕ್ಕೆ ಇಬ್ಬರ ಮನೆಯವರ ವಿರೋಧವಿತ್ತು. ಆದರೂ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಬೇಕು ಎಂದು ಯುವಕ-ಯುವತಿ ಎರಡೂ ಕುಟುಂಬದವರನ್ನು ಒಪ್ಪಿಸಿದ್ದಾರೆ.
ಎರಡೂ ಕುಟುಂಬ ಒಪ್ಪಿ ಮದುವೆಗೆ ಸಿದ್ಧತೆ ನಡೆಸಿತ್ತು. ಮಾರ್ಚ್ 6ರಂದು ಮದುವೆ ನಿಗದಿಯಾಗಿತ್ತು. ಮದುವೆಗೆ ಸಂಬಂಧಿಸಿದ ಶಾಸ್ತ್ರಗಳು ಅದ್ದೂರಿಯಾಗಿ ನಡೆದಿದ್ದವು. ಮದುವೆಗೆ ಇನ್ನೇನು ಒಂದು ದಿನವಿದೆ ಎನ್ನುವಾಗ ವಧು ಪುಷ್ಪಾ, ವರ ಮುಖೇಶ್ ಗೆ ಮೆಸೇಜ್ ಕಳುಹಿಸಿದ್ದಳು. ಮುಂದಿನ ಜನ್ಮದಲ್ಲಿ ಸಿಗುತ್ತೇನೆ ಎಂದು ಬರೆದಿದ್ದಳು. ಆಕೆಅ ಮೆಸೇಜ್ ಬಂದು ಕೆಲ ಹೊತ್ತಿನ ಬಳಿಕ ಪುಷ್ಪಾ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಬಂದಿದೆ. ಕಷ್ಟಪಟ್ಟು ಎರಡೂ ಕುಟುಂಬವನ್ನು ಮದುವೆಗೆ ಒಪ್ಪಿಸಿದ್ದರೂ ಕೊನೇ ಘಳಿಗೆಯಲ್ಲಿ ವಧುವೇ ನಾಪತ್ತೆಯಾಗಿರುವುದು ತಿಳಿದು ವರ ಶಾಕ್ ಆಗಿದ್ದಾನೆ. ವಧು ನಾಪತ್ತೆಯಾಗಲು ಕಾರಣ ವರನ ಮನೆಯವರ ವರದಕ್ಷಿಣೆ ಬೇಡಿಕೆ.
5 ವರ್ಷಗಳ ಪ್ರೀತಿಗೆ 8 ತಿಂಗಳ ಹಿಂದೆ ಎರಡೂ ಕುಟುಂಬ ಮದುವೆಗೆ ಒಪ್ಪಿತ್ತು. ಮದುವೆ ದಿನಾಂಕ ನಿಗದಿಯಾದ ಬಳಿಕ ವರನ ಕಡೆಯವರು ವರದಕ್ಷಿಣೆ ಬೇಡಿಕೆ ಹೆಚ್ಚಿಸಿದ್ದಾರೆ. ಇದರಿಂದ ಎರಡು ತಿಂಗಳ ಹಿಂದೆ ಮದುವೆ ರದ್ದಾಗಿತ್ತು. ಬಳಿಕ ಹುಡಿಗಿಯ ಕುಟುಂಬದವರು, ಸಂಬಂದಿಕರ ರಾಜಿ ಸಂಧಾನದ ಮೂಲಕ ಮತ್ತೆ ಮಾರ್ಚ್ 6ಕ್ಕೆ ಮದುವೆ ನಿಶ್ಚಯವಾಗಿತ್ತು. ಮದುವೆ ಹತ್ತಿರವಾಗುತ್ತಿದ್ದಂತೆ ವರನ ಕಡೆಯವರು ಮತ್ತೆ ಕ್ಯಾತೆ ತೆಗೆದಿದ್ದಾರೆ. ಮನನೊಂದ ವಧು ಮದುವೆ ಹಿಂದಿನ ದಿನ ನಾಪತ್ತೆಯಾಗಿದ್ದಾಳೆ. ವಧು ಪುಷ್ಪ ಈ ಘಟನೆಯಿಂದ ತೀವ್ರವಾಗಿ ಬೇಸರಗೊಂಡಿದ್ದಳು ಎಂದು ಆಕೆಯ ಸಹೋದರಿ ಹೇಳಿದ್ದಾಳೆ. ನಾಪತ್ತೆಯಾದ ಯುವತಿಗೆ ಹುಡುಕಾಟ ನಡೆಸಲಾಗಿದೆ.