
ನವದೆಹಲಿ: ಜಾರ್ಖಂಡ್‌ನ ಗರ್ವಾದಲ್ಲಿನ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಐದು ಜನರು ಸುಟ್ಟು ಕರಕಲಾದ ದುರಂತ ಘಟನೆ ನಡೆದಿದೆ.
ಈ ಘಟನೆ ರಾಂಕಾ ಪೊಲೀಸ್ ಠಾಣಾ ಪ್ರದೇಶದ ಗೋದರ್ಮಣ ಬಜಾರ್‌ನಲ್ಲಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಇಲ್ಲಿ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಮೂವರು ಮಕ್ಕಳು. ನಾವು ಘಟನೆಯ ತನಿಖೆ ನಡೆಸುತ್ತಿದ್ದೇವೆ ಎಂದು ಗರ್ವಾ ಎಸ್‌ಪಿ ದೀಪಕ್ ಪಾಂಡೆ ತಿಳಿಸಿದ್ದಾರೆ.
ಈ ಮಧ್ಯೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಘಟನೆಯಲ್ಲಿ ಸಂಭವಿಸಿದ ಜೀವಹಾನಿಗೆ ದುಃಖ ವ್ಯಕ್ತಪಡಿಸಿದ್ದಾರೆ.
ಗರ್ವಾದ ರಂಕಾ ಬ್ಲಾಕ್ ನಲ್ಲಿರುವ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಜನರು ಸಾವನ್ನಪ್ಪಿದ ದುಃಖದ ಸುದ್ದಿ ಸಿಕ್ಕಿದೆ. ‘ಮರಾಂಗ್ ಬುರು'(ಸರ್ವೋಚ್ಚ ಬುಡಕಟ್ಟು ದೇವತೆ) ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ದುಃಖಿತ ಕುಟುಂಬ ಸದಸ್ಯರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಸೋರೆನ್ ತಿಳಿಸಿದ್ದಾರೆ.