
ಚಾಮರಾಜನಗರ: ತಮಿಳುನಾಡಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯನ್ನು ತಾಯಿಯ ಸಹೋದರನೇ ಬಲವಂತವಾಗಿ ವಿವಾಹವಾಗಿ, ಆಕೆಯನ್ನು ಭುಜದ ಮೇಲೆ ಹೊತ್ತೊಯ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಬೆನ್ನಲ್ಲೇ ಇತ್ತ ಕರ್ನಾಟಕದ ಗಡಿ ಜಿಲ್ಲೆ ಚಾಮರಜನಗರದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಾಲ್ಯವಿವಾಹ, ಅಪ್ರಾಪ್ತರ ನಿಶ್ಚಿತಾರ್ಥ ವಿಚಾರ ತಿಳಿಯುತ್ತಿದ್ದಂತೆ ಶಳಕ್ಕೆ ಧಾವಿಸಿ ನಿಶ್ಚಿತಾರ್ಥ ತಡೆದಿದ್ದಾರೆ.
ಚಾಮರಾಜನಗರದ ಬಿಸಲ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ನಡೆಯುತ್ತಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ದೂರು ಬಂದಿತ್ತು. ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
17 ವರ್ಷದ ಅಪ್ರಾಪ್ತೆಯನ್ನು ಯುವಕನೊಂದಿಗೆ ವಿವಾಹ ಮಾಡಲು ಸಿದ್ಧತೆ ನಡೆದಿತ್ತು. ಈ ನಿಟ್ಟಿನಲ್ಲಿ ಇಂದು ಬಾಲಕಿಯ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ನಿಶ್ಚಿತಾರ್ಥಕ್ಕೆ ತಡೆ ನೀಡಿದ್ದಾರೆ.
ಎರಡೂ ಕುಟುಂಬದವರಿಗೆ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಹಾಗೂ ಕಾನೂನುಬಾಹಿರ ಎಂಬುದನ್ನು ಮನದಟ್ಟು ಮಾಡಿದ್ದಾರೆ. ಅಲ್ಲದೇ ಎರಡೂ ಕಡೆಯ ಪೋಷಕರಿಂದ ಮುಚ್ಚಳಿಕೆ ಬರೆಸಿಕ್ಕೊಂಡಿದ್ದು, ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.