ಬೆಂಗಳೂರು : ವಿಧಾನಸಭೆಯಲ್ಲಿ ಮಹತ್ವದ ಗ್ರೇಟರ್ ಬೆಂಗಳೂರು ವಿಧೇಯಕ ಮಂಡನೆಯಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಇಂದು ಮಹತ್ವದ ಗ್ರೇಟರ್ ಬೆಂಗಳೂರು ವಿಧೇಯಕ ಮಂಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಎಂದರೇನು?
ಬೆಂಗಳೂರನ್ನು ಏಳು ಭಾಗವಾಗಿ ಅಥವಾ ಇರುವ ಒಂದು ಪಾಲಿಕೆಯನ್ನು 7 ಪಾಲಿಕೆಗಳನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಇದರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಲಿದೆ. ಬೆಂಗಳೂರಿಗೆ ಮೂರು ಹಂತದ ಆಡಳಿತ ನೀಡುವುದು ಇದರ ಉದ್ದೇಶವಾಗಿದೆ.
ಮೂರು ಹಂತದ ಆಡಳಿತ ವ್ಯವಸ್ಥೆ ಹಾಗೂ ಗರಿಷ್ಠ 10 ಪಾಲಿಕೆ ಒಳಗೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು,ಬಿಬಿಎಂಪಿಯನ್ನು ವಿಭಜಿಸಿ ಐದು ಪಾಲಿಕೆಗಳಾಗಿ ಮಾಡುವ ಹಿಂದಿನ ಪ್ರಸ್ತಾಪಕ್ಕೆ ಬದಲಾಗಿ ಮಹಾನಗರದ ಎಲ್ಲಾ ಪ್ರದೇಶಗಳನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವ ಪ್ರಸ್ತಾಪವನ್ನು ವಿಧೇಯಕ ಒಳಗೊಂಡಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದ್ದು, ಬೆಂಗಳೂರು ನರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ನಗರವನ್ನು ಪ್ರತಿನಿಧಿಸುವ ಸಂಪುಟದ ಸಚಿವರು, ಶಾಸಕರು, ಮುಖ್ಯ ಆಯುಕ್ತರು ಸೇರಿ 21 ಸದಸ್ಯರಿರುತ್ತಾರೆ.ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯಾ ಪಾಲಿಕೆಗಳಿಗೆ ಪ್ರಾಧಿಕಾರ ಮಾರ್ಗದರ್ಶನ ನೀಡಲಿದೆ. ಎರಡನೇ ಹಂತದಲ್ಲಿ ಪಾಲಿಕೆಗಳು ಕಾರ್ಯನಿರ್ವಹಿಸಲಿದ್ದು, ಮೂರನೇ ಹಂತದಲ್ಲಿ ವಾರ್ಡ್ ಸಭಾಗಳು ಅಸ್ತಿತ್ವಕ್ಕೆ ಬರಲಿವೆ.
ಪ್ರತಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಅಲ್ಲಿನ ಮೇಯರ್, ಆಯುಕ್ತ, ಜಂಟಿ ಆಯುಕ್ತ, ಸ್ಥಾಯಿ ಸಮಿತಿಗಳು, ವಲಯ ಸಮಿತಿ, ವಾರ್ಡ್ ಹಾಗೂ ಏರಿಯ ಸಭಾಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು,ಬಿಬಿಎಂಪಿಯಲ್ಲಿ 12 ಸ್ಥಾಯಿ ಸಮಿತಿಗಳಿದ್ದವು. ಹೊಸದಾಗಿ ರಚಿಸಲಾಗುವ ಪಾಲಿಕೆಗಳಲ್ಲಿ ತಲಾ ಆರು ಸ್ಥಾಯಿ ಸಮಿತಿಗಳು ಇರುತ್ತವೆ. ಪಾಲಿಕೆಗಳ ವ್ಯಾಪ್ತಿಯಲ್ಲಿ ಅಲ್ಲಿನ ನಿಯಮಗಳನ್ನು ಆಧರಿಸಿ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲಾಗುವುದು.
ಹೆಚ್ಚುವರಿಯಾಗಿ ಕರ ಸಂಗ್ರಹಿಸಲು ಬೇರೆ ಬೇರೆ ಸೆಸ್ ಹಾಕುವ ಅಧಿಕಾರ ಇರುತ್ತದೆ. ತಡವಾಗಿ ತೆರಿಗೆ ಪಾವತಿ ಮಾಡುವವರಿಗೆ ಶೇಕಡ 9 ರಷ್ಟು ದಂಡ ವಿಧಿಸಲಾಗುವುದು. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹಾಗೂ ಸರ್ಕಾರ ನಿಗದಿ ಮಾಡುವ ಇನ್ನಿತರ ಪ್ರದೇಶಗಳು ಬಿಎಂಆರ್ಡಿಎ ವ್ಯಾಪ್ತಿಯಲ್ಲಿ ಇರುತ್ತವೆ.ಮುಖ್ಯ ಆಯುಕ್ತರು ಬೆಂಗಳೂರು ಪ್ರಾಧಿಕಾರ ಆಡಳಿತ ನಿರ್ವಹಿಸಲಿದ್ದು, ಆಯಾ ಪಾಲಿಕೆಗಳಲ್ಲಿ ಹಿರಿಯ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹಣಕಾಸು ಸಂಪನ್ಮೂಲಕ್ಕಾಗಿ ಪ್ರತ್ಯೇಕವಾಗಿ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಆರ್ಥಿಕ ಅಭಿವೃದ್ಧಿ ಏಜೆನ್ಸಿ ರಚಿಸಲಾಗುವುದು. ಪಾಲಿಕೆಗಳ ಸ್ವತ್ತು ರಕ್ಷಣೆಗೆ ಗ್ರೇಟರ್ ಬೆಂಗಳೂರು ಭದ್ರತಾ ಪಡೆ ರಚಿಸಲಾಗುವುದು.