ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಮದುವೆಯೊಂದು ಲೆಹೆಂಗಾ ವಿವಾದದಿಂದಾಗಿ ರದ್ದಾಗಿದೆ. ಫೆಬ್ರವರಿ 23, 2025 ರಂದು ಅಮೃತಸರದಿಂದ ವರನ ಮೆರವಣಿಗೆ ಪಾಣಿಪತ್‌ಗೆ ಆಗಮಿಸಿತು. ಆದರೆ, ವಧುವಿನ ಕಡೆಯವರು ವರನ ಕಡೆಯವರು ತಂದ ಲೆಹೆಂಗಾವನ್ನು ವಿರೋಧಿಸಿದಾಗ ಸಂತೋಷದ ಕ್ಷಣಗಳು ದುರಂತವಾಗಿ ಮಾರ್ಪಟ್ಟವು. ವಧುವಿನ ಕಡೆಯವರು ಚಾಂದಿನಿ ಚೌಕ್‌ನಿಂದ 40,000 ರೂಪಾಯಿಗಳಿಗೆ ಖರೀದಿಸಿದ ಲೆಹೆಂಗಾವನ್ನು ವಧು ಧರಿಸಬೇಕೆಂದು ಪಟ್ಟು ಹಿಡಿದರು.
ಇಷ್ಟೇ ಅಲ್ಲದೆ, ವರನ ಕಡೆಯವರು ಕೃತಕ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವಧುವಿನ ಕಡೆಯವರು ಆರೋಪಿಸಿದರು. ಈ ವಿಚಾರವಾಗಿ ಎರಡೂ ಕಡೆಯವರು ಜಗಳವಾಡಲು ಪ್ರಾರಂಭಿಸಿದ್ದು, ಈ ಗದ್ದಲದಲ್ಲಿ ಒಬ್ಬ ಅತಿಥಿ ಕತ್ತಿ ತೆಗೆದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅಂತಿಮವಾಗಿ, ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆದರೆ, ಈ ಗದ್ದಲದಿಂದಾಗಿ ಮದುವೆಯನ್ನೇ ರದ್ದುಗೊಳಿಸಲಾಯಿತು.
ವರನ ಸಹೋದರನ ಪ್ರಕಾರ, ವಧುವಿನ ಕಡೆಯವರು ಮದುವೆಗೆ ಒತ್ತಡ ಹೇರುತ್ತಿದ್ದರು ಮತ್ತು ದುಬಾರಿ ಉಡುಗೊರೆಗಳನ್ನು ಕೇಳುತ್ತಿದ್ದರು. ಆರಂಭದಲ್ಲಿ 20,000 ರೂಪಾಯಿ ಮೌಲ್ಯದ ಲೆಹೆಂಗಾ ಕೇಳಿದವರು, ನಂತರ ಹೆಚ್ಚು ದುಬಾರಿ ಲೆಹೆಂಗಾ ಬೇಕೆಂದು ಪಟ್ಟು ಹಿಡಿದರು. ವಧುವಿನ ತಾಯಿ, ವರನ ಕಡೆಯವರು 1 ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದರು ಮತ್ತು ಮದುವೆಯ ಅಗತ್ಯ ವಸ್ತುಗಳನ್ನು ಒದಗಿಸಲಿಲ್ಲ ಎಂದು ಆರೋಪಿಸಿದ್ದಾರೆ.