
ವಿಜಯವಾಡ: ಎಲ್ಲಾ ಮಹಿಳಾ ನೌಕರರು ಎಷ್ಟೇ ಮಕ್ಕಳನ್ನು ಹೊಂದಿದರೂ ಹೆರಿಗೆ ರಜೆ ನೀಡಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣದ ರಾಜ್ಯಗಳಲ್ಲಿ ಜನನ ಪ್ರಮಾಣ ಕುಸಿತ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಮಹಿಳಾ ನೌಕರರಿಗೆ ಹೆರಿಗೆ ರಜೆ ಮೇಲಿದ್ದ ನಿರ್ಬಂಧಗಳನ್ನು ಚಂದ್ರಬಾಬು ನಾಯ್ಡು ತೆರವುಗೊಳಿಸಿದ್ದು, ಎಲ್ಲಾ ಮಹಿಳಾ ನೌಕರರು ಎಷ್ಟೇ ಮಕ್ಕಳನ್ನು ಹೊಂದಿದರೂ ಹೆರಿಗೆ ರಜೆ ನೀಡುವುದಾಗಿ ಹೇಳಿದ್ದಾರೆ.
ಅದೇ ರೀತಿ, ಆಂಧ್ರಪ್ರದೇಶದ ವಿಜಯನಗರಂ ಸಂಸದ ಕಲಿಶೆಟ್ಟಿ ಅಪ್ಪಲನಾಯ್ಡು, ಮೂರನೇ ಮಕ್ಕಳನ್ನು ಹೊಂದುವ ಮಹಿಳೆಯರಿಗೆ ನನ್ನ ವೇತನದಿಂದ ಪ್ರೋತ್ಸಾಹಧನ ನೀಡುತ್ತೇನೆ. ಮೂರನೇ ಮಗು ಹೆಣ್ಣಾದರೆ 50 ಸಾವಿರ ರೂಪಾಯಿ, ಗಂಡಾದರೆ ಒಂದು ಹಸು ನೀಡುತ್ತೇನೆ ಎಂದು ಘೋಷಿಸಿದ್ದಾರೆ.