
ಬೆಂಗಳೂರು: ರಾಜ್ಯ ಸರ್ಕಾರ 2025- 26 ನೇ ಸಾಲಿನಿಂದ ಒಂದನೇ ತರಗತಿಗೆ ದಾಖಲಿಸಲು ಮಕ್ಕಳಿಗೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕೆಂದು ಎರಡು ವರ್ಷಗಳ ಹಿಂದೆಯೇ ನಿಯಮ ಜಾರಿಗೊಳಿಸಿದೆ. ಈ ನಿಯಮ ಜಾರಿಯಿಂದ 6 ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳಿರುವ, ವಾರ ಕಡಿಮೆ ಇರುವ ಸಾಕಷ್ಟು ಮಕ್ಕಳು ಶಾಲಾ ದಾಖಲಾತಿಯಿಂದ ವಂಚಿತರಾಗುತ್ತಾರೆ. ಹೀಗಾಗಿ ಕೆಲವು ತಿಂಗಳು ವಿನಾಯಿತಿ ನೀಡಬೇಕೆಂದು ಪೋಷಕರ ಸಂಘಟನೆಗಳು ಒತ್ತಾಯಿಸಿವೆ.
ಖಾಸಗಿ ಶಾಲಾ ಸಂಘಟನೆಗಳು, ಸರ್ಕಾರ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು. ಇದು ಇಂದಿನ ಆದೇಶವಲ್ಲ. ಎರಡು ವರ್ಷಗಳ ಹಿಂದೆಯೇ ಎಲ್ಕೆಜಿ, ಯುಕೆಜಿ ದಾಖಲಾತಿ ವಯೋಮಿತಿ ನಿಗದಿಪಡಿಸಿ ಆದೇಶ ಮಾಡಲಾಗಿದೆ. ಈಗ ಎಲ್ಕೆಜಿ, ಯುಕೆಜಿ ತರಗತಿ ಮಕ್ಕಳು ಬರುವ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿಯಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಯಾವುದೇ ಶಾಲೆಗಳು ಸರ್ಕಾರ ನಿಗದಿ ಮಾಡಿದ ವಯೋಮಿತಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಎಲ್‌ಕೆಜಿ ಯುಕೆಜಿಗೆ ದಾಖಲಿಸಿಕೊಂಡಿದ್ದರೆ ಅದು ಶಾಲೆಗಳ ತಪ್ಪಾಗುತ್ತದೆ ಎಂದು ಹೇಳಲಾಗಿದೆ.
ಒಂದನೇ ತರಗತಿ ದಾಖಲಾತಿಗೆ ಗೆರೆ ಎಳೆದಂತೆ ಆಯಾ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ಅವೈಜ್ಞಾನಿಕ. ಇದರಿಂದ ಲಕ್ಷಾಂತರ ಮಕ್ಕಳು ಒಂದನೇ ತರಗತಿ ಬದಲು ಪೂರ್ವ ಪ್ರಾಥಮಿಕ ತರಗತಿಯಲ್ಲಿಯೇ ಮತ್ತೊಂದು ವರ್ಷ ಕಳೆಯಬೇಕಿದೆ. ಈ ಹಿಂದೆ ಇದ್ದಂತೆ ಕನಿಷ್ಠ ಕೆಲವು ತಿಂಗಳ ವಿನಾಯಿತಿ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.