
ನವದೆಹಲಿ: ಮೋಟಾರ್ ವಾಹನ ಕಾಯ್ದೆಯಡಿ ವಿಮೆ ಪರಿಹಾರ ಪಡೆಯಲು ಅನೇಕ ಅಪಘಾತಗಳಲ್ಲಿ ಒಂದೇ ವಾಹನ ಬಳಕೆ ಮಾಡಿ ವಂಚಿಸುತ್ತಿದೆ ಎಂಬ ವಿಮಾ ಕಂಪನಿಯ ದೂರಿನ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನೈಜವಾಗಿರದ ಕ್ಲೈಮ್ ಗಳನ್ನು ನಿರಾಕರಿಸುವ ವಿಷಯದಲ್ಲಿ ವಿಮೆ ಕಂಪನಿಗಳನ್ನು ಶಕ್ತಿಹೀನ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಆಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಒಡಿಶಾದ ವಿಮೆ ಸಂಬಂಧಿ ಪ್ರಕರಣದ ಕುರಿತು ತನಿಖೆ ನಡೆಸಲು ಎಸ್ಐಟಿ ರಚಿಸುವಂತೆ ಅಲ್ಲಿನ ಡಿಜಿಪಿಗೆ ಸುಪ್ರೀಂ ಕೋರ್ಟ್ ನಿಂದ ನಿರ್ದೇಶನ ನೀಡಲಾಗಿದೆ.
ಅಪಘಾತ ವಿಮೆ ಪಾವತಿಸುವಂತೆ ಒಡಿಶಾ ಹೈಕೋರ್ಟ್ 2022ರ ಮೇ 9ರಂದು ನೀಡಿದ ತೀರ್ಪಿನ ವಿರುದ್ಧ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
2017ರ ಅಕ್ಟೋಬರ್ 19ರಂದು ಅಪಘಾತ ಸಂಭವಿಸಿತ್ತು. ಕ್ಲೈಂ ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇಕಡ 7ರಷ್ಟು ಬಡ್ಡಿಯೊಂದಿಗೆ ಪರಿಹಾರವಾಗಿ 40,42,162 ರೂ. ಪಾವತಿಸುವಂತೆ ಹೈಕೋರ್ಟ್ ವಿಮಾ ಕಂಪನಿಗೆ ನಿರ್ದೇಶಿಸಿತ್ತು.
ವಿಮಾ ಕಂಪನಿ ಪರವಾಗಿ ಹಾಜರಾದ ವಕೀಲ ಹೆಚ್. ಚಂದ್ರಶೇಖರ್, ಅಪಘಾತದಲ್ಲಿ ಭಾಗಿಯಾಗಿದೆ ಎಂದು ಹೇಳಲಾದ ವಾಹನ ಇತರೆ ನಾಲ್ಕು ಕ್ಲೈಮುಗಳಲ್ಲಿಯೂ ಭಾಗಿಯಾಗಿದೆ. ಅಪಘಾತದಲ್ಲಿ ಭಾಗಿಯಾಗದ ವಾಹನದ ದಾಖಲೆ ಸಲ್ಲಿಸಿ ದುರದ್ದೇಶದಿಂದ ವಿಮೆ ಪಡೆಯುವ ಯತ್ನ ಇದ್ದಾಗಿದ್ದು, ಇದೊಂದು ವಂಚನೆ ಎಂದು ಹೇಳಿದ್ದಾರೆ.
ಅಪರಿಚಿತ ವಾಹನ ತನ್ನ ಸಹೋದರನಿಗೆ ಡಿಕ್ಕಿ ಹೊಡೆದಿದೆ ಎಂದು ಮೃತನ ಸಹೋದರ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಎಫ್ಐಆರ್ ದಾಖಲಿಸುವ ವೇಳೆ ಅಪಘಾತ ಎಸಗಿದ ವಾಹನದ ಸಂಖ್ಯೆ ನೀಡಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಈ ದೂರಿನ ಬಗ್ಗೆ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ ನ್ಯಾಯಪೀಠ ಏಪ್ರಿಲ್ 17ಕ್ಕೆ ವಿಚಾರಣೆ ಮುಂದೂಡಿದೆ.