
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಬೀದಿಬದಿ ವ್ಯಾಪಾರಸ್ಥರು, ಕಾರ್ಮಿಕರಿಗೆ ನೆರವಿನ ಹಸ್ತ ಚಾಚಲಾಗಿದೆ.
ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಿಸಲು ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆಯುವವರಿಗೆ ಶೇಕಡ 8ರಷ್ಟು ಬಡ್ಡಿಯನ್ನು ಸಹಾಯಧನವಾಗಿ ನೀಡಲಾಗುವುದು. ಪಿಎಂ ಸ್ವನಿಧಿ ಯೋಜನೆಯಡಿ ಸಾಲದ ಗರಿಷ್ಠ ಮಿತಿಯನ್ನು ತಲುಪಿರುವ ಬೀದಿ ಬದಿ ವ್ಯಾಪಾರಿಗಳಿಗೆ ಈ ಕೊಡುಗೆ ಪ್ರಕಟಿಸಲಾಗಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 750 ಕೋಟಿ ರೂ. ವೆಚ್ಚದಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಸತಿ ಶಾಲೆ ನಿರ್ಮಿಸಲಾಗುವುದು. ಶೈಕ್ಷಣಿಕ, ವೈದ್ಯಕೀಯ ಇತರೆ ಸೌಲಭ್ಯ ವಿಸ್ತರಿಸಿ ಧನ ಸಹಾಯ ದ್ವಿಗುಣಗೊಳಿಸುವ ಮೂಲಕ ಪ್ರೋತ್ಸಾಹ ನೀಡಲಾಗಿದೆ.
ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜವಾಗಿ ಮರಣ ಹೊಂದಿದಾಗ ನೀಡುತ್ತಿದ್ದ 75,000 ರೂ. ನೆರವನ್ನು 1.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು 5 ಲಕ್ಷದಿಂದ 8 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕ್ಯಾನ್ಸರ್ ಮತ್ತು ಹೃದ್ರೋಗ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ ರೂ., ಇತರೆ ಕಾಯಿಲೆಗಳಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ನೀಡಲಾಗುವುದು. ವಿಮಾ ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು 51 ಕೋಟಿ ರೂಪಾಯಿ ನೀಡಲಾಗಿದೆ.