
ಬೆಂಗಳೂರು: ಶಾಲಾ ಶಿಕ್ಷಣ ಸುಧಾರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಹಲವು ಘೋಷಣೆ ಮಾಡಲಾಗಿದೆ.
ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಫೇಸ್ ರೆಕಗ್ನಿಷನ್, 550 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ, ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಎರಡು ಸಾವಿರ ರೂಪಾಯಿ ಹೆಚ್ಚಳ, ಬಿಸಿಯೂಟ ನೌಕರರ ಗೌರವ ಧನ 1000 ರೂ. ಹೆಚ್ಚಳ, 10267 ಸರ್ಕಾರಿ ಶಾಲೆ ಶಿಕ್ಷಕರ ನೇಮಕ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಕೆಗಾಗಿ ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಡಿ ಕೋಡ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಒಟ್ಟಾರೆ 45,286 ಕೋಟಿ ರೂಪಾಯಿ ಅನುದಾನ ಒದಗಿಸಿದ್ದು, ಇದು ಒಟ್ಟು ಬಜೆಟ್ ಗಾತ್ರದ ಶೇ. 10 ರಷ್ಟಾಗಿದೆ. ಶಿಕ್ಷಣಕ್ಕೆ ಕಳೆದ ಬಜೆಟ್ ಗಿಂದ ಶೇಕಡ 2ರಷ್ಟು ಅನುದಾನ ಕಡಿಮೆಯಾಗಿದೆ.
ಪ್ರೌಢಶಾಲೆ, ಪಿಯು ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗೆ ಸ್ಕಿಲ್ ಅಟ್ ಸ್ಕೂಲ್ ಕಾರ್ಯಕ್ರಮ ರೂಪಿಸಲಾಗಿದೆ. ಸದ್ಯ 2619 ಸರ್ಕಾರಿ ಶಾಲೆಗಳಲ್ಲಿರುವ ಎಲ್.ಕೆ.ಜಿ., ಯುಕೆಜಿ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು 5 ಸಾವಿರ ಶಾಲೆಗಳಿಗೆ ವಿಸ್ತರಿಸಲಾಗುವುದು.