
ನವದೆಹಲಿ: ಬಹುನಿರೀಕ್ಷಿತ ಬೆಂಗಳೂರಿನ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕನಕಪುರ ರಸ್ತೆ ಸಮೀಪ ನಿರ್ಮಾಣವಾಗುವ ಸಾಧ್ಯತೆ ಇದೆ.
ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಅಂತಿಮಗೊಳಿಸಿರುವ ರಾಜ್ಯ ಸರ್ಕಾರ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಗುರುವಾರ ಪ್ರಸ್ತಾವನೆ ಸಲ್ಲಿಸಿದೆ.
ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಯತ್ನ ನಡೆಸಿದೆ. ಇದರ ನಡುವೆಗೆ ಬೆಂಗಳೂರಿನ ಎಲ್ಲಾ ಭಾಗಗಳಿಗೆ ವಿಶೇಷವಾಗಿ ಐಟಿ-ಬಿಟಿ ಕಂಪನಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ.
ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಎರಡು ಕನಕಪುರ ರಸ್ತೆಯಲ್ಲಿದ್ದು, ಇನ್ನೊಂದು ಬೆಂಗಳೂರು ವಾಯುವ್ಯ ಭಾಗದ ನೆಲಮಂಗಲ ಕುಣಿಗಲ್ ರಸ್ತೆ ಮಧ್ಯಭಾಗದಲ್ಲಿದೆ. ಇದು 5,200 ಎಕರೆ ಪ್ರದೇಶ ಹೊಂದಿದೆ. ಕನಕಪುರ ರಸ್ತೆಯಲ್ಲಿ ನಿಗದಿಯಾದ ಮೊದಲ ಸ್ಥಳ 4800 ಎಕರೆ ಪ್ರದೇಶದಲ್ಲಿದೆ. ಎರಡನೇ ಸ್ಥಳ 5 ಸಾವಿರ ಎಕರೆ ಹೊಂದಿದೆ.
ರಾಜ್ಯ ಸರ್ಕಾರ ಸ್ಥಳ ಆಯ್ಕೆ ಅಂತಿಮಗೊಳಿಸಿ ಶಿಫಾರಸು ಮಾಡಿದ್ದರೂ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸ್ಥಳ ಪರಿಶೀಲಿಸಿ ಅಂತಿಮ ನಿರ್ಧಾರ ತಿಳಿಸುತ್ತದೆ. ನಂತರ ರಾಜ್ಯ ಕಾರ್ಯ ಸಾಧ್ಯತೆ ವರದಿ ಸಿದ್ದಪಡಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎನ್ನಲಾಗಿದೆ.