
ಬೆಂಗಳೂರು: ರಾಜ್ಯದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆಯೇ ನಿರಂತರ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಸಿ.ಬಿ. ಸುರೇಶ್ ಬಾಬು ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ತಾಂತ್ರಿಕ ಸಾದ್ಯತೆ ಇರುವ ಉಪ ಕೇಂದ್ರಗಳಿಂದ ನಿರಂತರ 7 ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ತಾಂತ್ರಿಕ ಸಾಧ್ಯತೆ ಇಲ್ಲದ ಉಪ ಕೇಂದ್ರಗಳಲ್ಲಿ ಪಾಳಿಯಲ್ಲಿ ಹಗಲು ವೇಳೆ 4 ಗಂಟೆ, ರಾತ್ರಿ ವೇಳೆ 3 ಗಂಟೆ ಸೇರಿ ಒಟ್ಟು 7 ಗಂಟೆ 3 ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂತರ್ಜಲ ಕುಸಿತದ ಕಾರಣ ಉಲ್ಲೇಖಿಸಿ ತ್ರೀ ಫೇಸ್ ವಿದ್ಯುತ್ ಸರಬರಾಜು ಸಮಯ ಬದಲಾವಣೆಯ ಕೋರಿಕೆ ಬಂದಿಲ್ಲ ಎಂದು ಸಚಿವ ಜಾರ್ಜ್ ಮಾಹಿತಿ ನೀಡಿದ್ದಾರೆ.