
ಬೆಂಗಳೂರು: ಹಲವು ವರ್ಷಗಳ ಕಾಲ ಪ್ರೀತಿಸಿ ಕುಟುಂಬದವರನ್ನು ಒಪ್ಪಿಸಿ ಇನ್ನೇನು ಅದ್ದೂರಿ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವರ ಮಹಾಶಯ ವರದಕ್ಷಿಣೆ ಬೇಡಿಕೆ ಇಟ್ಟು ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುವತಿಯ ತಂದೆ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರ ಹಾಗೂ ಆತನ ಕುಟುಂಬದವರ ವಿರುದ್ಧ ಎಫ್ಐ ಆರ್ ದಾಖಲಾಗಿದೆ.
ಯುವತಿ ಹಾಗೂ ಯುವಕ ಕಾಲೇಜು ದಿನಗಳಿಂದಲೂ ಪರಿಚಯದವರು. ವಿದ್ಯಾಭ್ಯಾಸ ಮುಗಿಸಿ ಇಬ್ಬರೂ ಫ್ರಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಭಾರತಕ್ಕೆ ಬಂದಿದ್ದ ಯುವತಿ ತನ್ನ ಪ್ರೀತಿಯ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು. ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ಈ ವರ್ಷ ಮಾರ್ಚ್ 2ರಂದು ಮದುವೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಮದುವೆ ಮಾತುಕತೆ ಬಳಿಕ ಯುವತಿ ಮತ್ತೆ ಕೆಲಸಕ್ಕೆ ಫ್ರಾನ್ಸ್ ಗೆ ತೆರಳಿದ್ದಳು. ಬಳಿಕ ಫೆ.17ರಂದು ಯುವತಿ ಭಾರತಕ್ಕೆ ವಾಪಾಸ್ ಆಗಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಳು.
ಈ ವೇಳೆ ಮದುವೆಗೆ ಬಟ್ಟೆ ಖರೀದಿಸಲು ದೆಹಲಿ ಅತಿಥಿ ಗೃಹದಲ್ಲಿ ಉಳಿದಿದ್ದಳು. ಅಲ್ಲಿ ಭೇಟಿಯಾದ ಯುವಕ ವರ, ಯುವತಿ ಜೊತೆ ಯುರೋಪಿಯನ್ ಸಂಸ್ಕೃತಿಯ ಪ್ರಕಾರ ಮದುವೆಗೆ ಮೊದಲೇ ಸಂಬಂಧ ಹೊಂದಿರಬೇಕು ಎಂದು ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮದುವೆಗೆ ರೈಲ್ವೆ ಆಫೀಸರ್ಸ್ ಎನ್ ಕ್ಲೇವ್ ನ ನಂದಿ ಕ್ಲಬ್ ಬುಕ್ ಮಡಲಾಗಿತ್ತು. ಫೆ.28ರಂದು ಉತ್ತರ ಭಾರತ ಶೈಲಿಯಂತೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮರುದಿನ ಸಂಜೆ ಅರಿಷಿಣ ಶಾಸ್ತ್ರ, ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಲ್ಲದರಲ್ಲೂ ಭಾಗಿಯಾಗಿದ್ದ ಯುವಕ ಮದುವೆ ದಿನ ಕೈಕೊಟ್ಟಿದ್ದಾನೆ. ಮದುವೆಗೆ ಒಂದುದಿನ ಮೊದಲು ಅಂದರೆ ಮಾರ್ಚ್ 1ರಂದು ರಾತ್ರಿ 11 ಗಂಟೆಗೆ ವರನ ಪೋಷಕರು 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಒಂದು ಮರ್ಸಿಡೀಸ್ ಬೆಂಜ್ ಕಾರು ಕೇಳಿದ್ದಾರೆ. ಇದಕ್ಕೆ ಯುವತಿಯ ತಂದೆ ಈಗಾಗಲೇ 25 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಈಗಲೇ ಇನ್ನಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮದುವೆ ದಿನ ಬೆಳಿಗ್ಗೆ ನೋಡುವಷ್ಟರಲ್ಲಿ ವರ ಹಾಗೂ ಪೋಷಕರು ನಾಪತ್ತೆಯಾಗಿದ್ದಾರೆ. ಯುವತಿಯ ತಂದೆ ಕರೆ ಮಾಡಿ ವರನಿಗೆ ವಿಚಾರಿಸಿದರೆ ನನ್ನ ಪೋಷಕರ ಬೇಡಿಕೆಯನ್ನು ಈಡೇರಿಸಿಲ್ಲ. ಅವರು ಕೇಳಿದಷ್ಟು ಹಣ, ಒಡವೆ, ಕಾರು ನೀಡದಿದ್ದರೆ ಮದುವೆಯಾಗಲ್ಲ ಎಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.