
ಬೆಂಗಳೂರು: ಸಬ್ ಇನ್ ಸ್ಪೆಕ್ಟರ್ ವಿರುದ್ಧ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಯಾಗ್ ರಾಜ್ ಕುಂಭಮೇಳಕ್ಕೆ ಕರೆದೊಯ್ದು ಥಳಿಸಿರುವುದಾಗಿ ಆರೋಪಿಸಲಾಗಿದೆ.
ಕಲಬುರಗಿಯ ವೈರ್ ಲೆಸ್ ಸಬ್ ಇನ್ಸ್ಪೆಕ್ಟರ್ ಉತ್ತಮ್ ಸಿಂಗ್ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಲ್ಬುರ್ಗಿಯಲ್ಲಿ ಸ್ವಿಮ್ಮಿಂಗ್ ತರಬೇತಿ ವೇಳೆ ಇಬ್ಬರ ಪರಿಚಯವಾಗಿತ್ತು. ಕೆಲವು ವರ್ಷಗಳ ಹಿಂದೆ ಯುವತಿ ಕಲಬುರ್ಗಿಯಲ್ಲಿ ಇದ್ದಾಗ ಪರಿಚಯವಾಗಿದ್ದು, ಆ ಬಳಿಕ ಕೆಲಸಕ್ಕೆ ಎಂದು ರಾಜಧಾನಿ ಬೆಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಹೊಸ ಕಾರ್ ಖರೀದಿಸಿದ ಬಗ್ಗೆ ಕರೆ ಮಾಡಿ ಯುವತಿಗೆ ಹೇಳಿದ್ದ ಪಿಎಸ್ಐ ಕುಂಭಮೇಳಕ್ಕೆ ಹೋಗೋಣ ಬಾ ಎಂದು ಕರೆದಿದ್ದ.
ಉತ್ತಮ್ ಸಿಂಗ್ ಹಳೆ ಪರಿಚಯ ಎಂದು ಕುಂಭಮೇಳಕ್ಕೆ ಹೋಗಲು ಯುವತಿ ಒಪ್ಪಿದ್ದರು. ಫೆಬ್ರವರಿ 19ರಂದು ಯುವತಿಯನ್ನು ಪಿಎಸ್ಐ ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದ. ಇತರ ಪೊಲೀಸ್ ಅಧಿಕಾರಿ ಸ್ನೇಹಿತರ ಜೊತೆಗೆ ಕರೆದುಕೊಂಡು ಹೋಗಿದ್ದು, ಪ್ರಯಾಗ್ ರಾಜ್ ಕುಂಭಮೇಳದಿಂದ ಅಯೋಧ್ಯೆಗೂ ಹೋಗಿದ್ದರು. ಅಯೋಧ್ಯೆಯಿಂದ ಮನಾಲಿಗೆ ಹೋಗೋಣ ಎಂದು ಪಿಎಸ್ಐ ಹೇಳಿದ್ದು, ಈ ವೇಳೆ ಬೇರೆ ಕಡೆ ಎಲ್ಲಿಗೂ ನಾನು ಬರುವುದಿಲ್ಲ ಎಂದು ಯುವತಿ ಹೇಳಿದ್ದಾಳೆ.
ಇಲ್ಲಿಗೆ ಇಳಿದುಬಿಡು ಎಂದು ಉತ್ತಮ್ ಸಿಂಗ್ ನಿಂದಿಸಿದ್ದಾರೆ. ಅಲ್ಲದೇ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾರೆ. ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿರುವುದಾಗಿ ಯುವತಿ ಹೇಳಿಕೊಂಡಿದ್ದಾರೆ. ತಕ್ಷಣ ಕಾರ್ ನಿಲ್ಲಿಸಿ ಸ್ಥಳೀಯ ಪೊಲೀಸರ ಸಹಾಯವನ್ನು ಯುವತಿ ಪಡೆದುಕೊಂಡಿದ್ದಾರೆ.
ಉತ್ತಮ್ ಸಿಂಗ್ ಸೇರಿದಂತೆ ಎಲ್ಲರನ್ನೂ ಹಿಮಾಚಲ ಪ್ರದೇಶದ ಪೂಂಟಾ ಸಾಹೀಬ್ ಠಾಣೆಗೆ ಸ್ಥಳೀಯ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ತಮ್ಮ ವಿಳಾಸದಲ್ಲೇ ದೂರು ಕೊಡಲು ಹೇಳಿ ಕಳುಹಿಸಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಯುವತಿ ಮಾರ್ಚ್ 1ರಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.