
ಬೆಂಗಳೂರು: ಚಿತ್ರರಂಗದ ನಟರ ನಟ್ಟು, ಬೋಲ್ಟ್ ಟೈಟ್ ಮಾಡಬೇಕು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಡಿ.ಕೆ.ಶಿವಕುಮಾರ್ ಹೇಳಿರೋದು ನೂರಕ್ಕೆ ನೂರರಷ್ಟು ಸರಿ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್, ಕನ್ನಡ ಚಿತ್ರರಂಗದ ಕೆಲ ಕಲಾವಿದರಲ್ಲಿ ಧೀಮಾಕು ಹೆಚ್ಚಾಗಿದೆ. ಅಂತವರಿಗೆ ಸರ್ಕಾರ ನಟ್ಟು, ಬೋಲ್ಟು ಟೈಟ್ ಮಾಡಬೇಕು. ಯಾರು ಕರೆಕ್ಟ್ ಇರ್ತಾರೋ ಅವರಿಗೆ ಅದು ಎಫೆಕ್ಟ್ ಆಗುವುದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಯಾವುದನ್ನೂ ಸುಮ್ಮನೇ ಹೇಳುವುದಿಲ್ಲ. ಅವರು ಏನಾದರೂ ಹೇಳಿದ್ದಾರೆ ಅಂದರೆ ಅದು 100% ಸರಿ ಇರುತ್ತದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಯಾರನ್ನೂ ಅವಮಾನ ಮಾಡಿ ಮಾತನಾಡಲ್ಲ. ಚಿತ್ರರಂಗದ ಕೆಲ ಕಲಾವಿದರು ದುರಹಂಕಾರದಿಂದ ಮೆರೆಯುತ್ತಿದ್ದಾರೆ. ನಟರು ಆಕಾಶದಿಂದ ಬಂದವರಂತೆ ಆಡುತ್ತಾರೆ. ನಟ್ಟು, ಬೋಲ್ಟು ಟೈಟ್ ಮಾಡಬೇಕು ಎಂದು ಹೇಳಿರುವುದು ಸರಿಯಿದೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ, ಸುಮ್ಮನೇ ಧರಣಿ ಮಾಡ್ತಿದ್ದಾರೆ. ಅಶೋಕ್ ಗೆ ಏಡ್ಸ್ ಇಂಜಕ್ಷನ್ ಕೊಟ್ಟು ಸಾಯಿಸಲು ಹೊರಟಿದ್ದರು ಎಂದು ಪರೋಕ್ಷವಾಗಿ ಶಾಸಕ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್.ಅಶೋಕ್ ಗೆ ಧಮ್ ಇಲ್ವಾ? ಅವರನ್ನು ಟೈಟ್ ಮಾಡಲು? ಏಡ್ಸ್ ಇಂಜಕ್ಷನ್ ಚುಚ್ಚಲು ಹೋದವರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಅಂತವರ ನಟ್ಟು, ಬೋಲ್ಟ್ ನ್ನು ಅಶೋಕ್ ಮೊದಲು ಟೈಟ್ ಮಾಡಲಿ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಗುಡುಗಿದರು.