
ಠಾಣೆ: ಮಹಾರಾಷ್ಟ್ರದ ಠಾಣೆಯ ಉಲ್ಲಾಸ ನಗರದಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮತ್ತು ಬಾಲಕಿಯ ಗರ್ಭಪಾತಕ್ಕೆ ಸಹಕರಿಸಿದ ವೈದ್ಯನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಸ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಶಂಕರ್ ಅವತಾಡೆ ಮಾಹಿತಿ ನೀಡಿದ್ದು, ಉಲ್ಲಾಸ ನಗರದಲ್ಲಿ ವಾಸವಾಗಿರುವ 29 ವರ್ಷದ ವ್ಯಕ್ತಿ ಕಳೆದ ವರ್ಷ ಜುಲೈ ನಲ್ಲಿ ಪತ್ನಿ, ತಾಯಿ, ಮಕ್ಕಳು ಊರಿಗೆ ಹೋಗಿದ್ದ ವೇಳೆ ನೆರೆಮನೆಯ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಚಾರ ಎಸಗಿದ್ದ. ಇದೇ ರೀತಿ ಹಲವು ಬಾರಿ ಆರೋಪಿ ಅತ್ಯಾಚಾರ ಎಸಗಿದ್ದು, ವಿಚಾರ ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಎಂದು ತಿಳಿಸಿದ್ದಾರೆ.
ಕೆಲವು ತಿಂಗಳ ನಂತರ ಬಾಲಕಿ ಗರ್ಭಿಣಿಯಾಗಿರುವುದನ್ನು ಆರೋಪಿಗೆ ತಿಳಿಸಿದ್ದಾಳೆ. ಆಗ ವೈದ್ಯರಿಂದ ಗರ್ಭಪಾತದ ಮಾತ್ರೆ ಖರೀದಿಸಿ ಬಾಲಕಿಗೆ ನೀಡಿದ್ದ. ಆದರೆ ಗರ್ಭಪಾತ ಆಗಿರಲಿಲ್ಲ. ಬಾಲಕಿಯ ಪೋಷಕರು ಊರಿಗೆ ತೆರಳಿದ್ದ ವೇಳೆ ಆರೋಪಿಯ ಪತ್ನಿ, ತಾಯಿ ಮತ್ತು ಅತ್ತೆ ಸೇರಿಕೊಂಡು ಆಕೆಯನ್ನು ಕಲ್ಯಾಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸುಳ್ಳು ಮಾಹಿತಿ ನೀಡಿ ಗರ್ಭಪಾತ ಮಾಡಿಸಿದ್ದರು. ನಂತರ ಭ್ರೂಣವನ್ನು ಉಲ್ಲಾಸ್ ನಗರದ ಸ್ಮಶಾನದಲ್ಲಿ ಹೂತು ಹಾಕಿದ್ದರು
ಎಂದು ತಿಳಿಸಿದ್ದಾರೆ.
ಫೆಬ್ರವರಿ 23 ರಂದು ಗ್ರಾಮದಿಂದ ಪೋಷಕರು ಮರಳಿದ ನಂತರ ಬಾಲಕಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಫೆಬ್ರವರಿ 25ರಂದು ಆರೋಪಿ ಮತ್ತು ಗರ್ಭಪಾತದ ಮಾತ್ರೆ ನೀಡಿದ್ದ ವೈದ್ಯನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.