
ಭೋಪಾಲ್: ಜನ ಸರ್ಕಾರದ ಬಳಿ ಭಿಕ್ಷೆ ಬೇಡುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ ಪ್ರಹ್ಲಾದ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇಂದ್ರದ ಮಾಜಿ ಸಚಿವರಾಗಿರುವ ಮಧ್ಯಪ್ರದೇಶದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಹ್ಲಾದ್ ಪಟೇಲ್ ನೀಡಿರುವ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯಲ್ಲಿ ವೀರಾಂಗಣಿ ರಾಣಿ ಅವಂತಿಬಾಯಿ ಲೋದಿಯವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ಸರ್ಕಾರಕ್ಕೆ ಮಾಡುವ ಮನವಿಗಳನ್ನು ಭಿಕ್ಷೆ ಎಂದು ಕರೆದಿದ್ದು, ಜನರಿಗೆ ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆದಿದೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರದಿಂದ ಭಿಕ್ಷೆ ಬೇಡುವ ಪರಿಪಾಠವನ್ನು ಜನ ಬೆಳೆಸಿಕೊಂಡಿದ್ದಾರೆ. ನಾಯಕರು ಬಂದಾಗ ಜನ ಮನವಿಗಳ ಪಟ್ಟಿಯನ್ನು ಸಲ್ಲಿಸುತ್ತಾರೆ. ವೇದಿಕೆಯ ಮೇಲೆ ಹಾರ ಹಾಕಿ ಕೈಯಲ್ಲಿ ಮನವಿ ಪತ್ರ ಕೊಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ, ಕೇಳುವ ಬದಲು ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಇದರಿಂದ ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.
ಉಚಿತ ವಸ್ತುಗಳ ಮೇಲಿನ ಅತಿಯಾದ ಅವಲಂಬನೆಯಿಂದ ಸಮಾಜವನ್ನು ಬಲಪಡಿಸುವ ಬದಲು ದುರ್ಬಲಗೊಳಿಸಿದಂತಾಗುತ್ತದೆ. ಇಂತಹ ಭಿಕ್ಷುಕರ ಸೈನ್ಯವೂ ಸಮಾಜವನ್ನು ಬಲಪಡಿಸುತ್ತಿಲ್ಲ. ಬದಲಾಗಿ ದುರ್ಬಲಗೊಳಿಸುತ್ತಿದೆ. ಉಚಿತ ವಸ್ತುಗಳ ಮೇಲಿನ ಆಕರ್ಷಣೆಯು ಶ್ರೇಷ್ಠ ಮಹಿಳೆಯರಿಗೆ ಗೌರವದ ಸಂಕೇತವೆಲ್ಲ ಎಂದು ಹೇಳಿದ್ದಾರೆ.