
ಸ್ಥಳೀಯ ರಸ್ತೆಯ ಕಳಪೆ ಸ್ಥಿತಿಯಿಂದ ಬೇಸತ್ತ ಬ್ರಿಟಿಷ್ ಗ್ರಾಮಸ್ಥನೊಬ್ಬ ವ್ಯಂಗ್ಯದ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾನೆ. ದೊಡ್ಡ ಗುಂಡಿಯೊಂದರಲ್ಲಿ ಶೇಖರಣೆಯಾದ ನೀರಿನಲ್ಲಿ ನಕಲಿ ಕಾಲುಗಳನ್ನು ಇಟ್ಟು, ರಸ್ತೆಯ ದುರಸ್ತಿಗಾಗಿ ಒತ್ತಾಯಿಸಿದ್ದಾನೆ.
ಕ್ಯಾಂಬ್ರಿಡ್ಜ್‌ಶೈರ್ ಗ್ರಾಮದ ಕ್ಯಾಸಲ್ ಕ್ಯಾಂಪ್ಸ್‌ನ ಹ್ಯಾವರ್‌ಹಿಲ್ ರಸ್ತೆಯಲ್ಲಿನ ದೊಡ್ಡ ಗುಂಡಿ, ಆ ಪ್ರದೇಶದಲ್ಲಿ ರೂಪುಗೊಂಡಿರುವ ಹಲವಾರು ಗುಂಡಿಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.
41 ವರ್ಷದ ಬಡಗಿ ಜೇಮ್ಸ್ ಕಾಕ್ಸಲ್, ಎಂಟು ತಿಂಗಳಿಂದ ಈ ಗುಂಡಿ ಇಲ್ಲೇ ಇದೆ ಎಂದು ತಿಳಿಸಿದ್ದಾರೆ. ರಸ್ತೆ ಹೆಚ್ಚು ಜನನಿಬಿಡವಾಗಿಲ್ಲದಿದ್ದರೂ, ಎದುರಿನಿಂದ ವಾಹನಗಳು ಬಂದರೆ ಚಾಲಕರು ನಿಲ್ಲಿಸಬೇಕು ಅಥವಾ ಗುಂಡಿಗೆ ಇಳಿಸಬೇಕು ಎಂದು ಅವರು ವಿವರಿಸಿದ್ದಾರೆ.
ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಯಿಂದ ಬೇಸತ್ತ ಕಾಕ್ಸಲ್ ಮತ್ತವರ ಕುಟುಂಬ ವ್ಯಂಗ್ಯವಾಗಿ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಿತು. ಹಳೆಯ ಬಟ್ಟೆ ಮತ್ತು ಚಿಂದಿಗಳನ್ನು ಬಳಸಿ ಜೀನ್ಸ್ ಮತ್ತು ವರ್ಣರಂಜಿತ ಬೂಟುಗಳನ್ನು ಧರಿಸಿದ ಜೋಡಿ ಕಾಲುಗಳನ್ನು ಮಾಡಿ ಗುಂಡಿಯಲ್ಲಿಟ್ಟಿದ್ದಾರೆ.
ಕಾಕ್ಸಲ್ ಈ ಪ್ರತಿಭಟನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಹಲವು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಈ ಮಧ್ಯೆ, ಕೌಂಟಿ ಕೌನ್ಸಿಲ್ ತನ್ನ ಆನ್‌ಲೈನ್ ಸೌಲಭ್ಯ ಬಳಸಿ ಗುಂಡಿಗಳನ್ನು ವರದಿ ಮಾಡಲು ನಿವಾಸಿಗಳನ್ನು ಪ್ರೋತ್ಸಾಹಿಸಿದೆ.