ಬೆಂಗಳೂರು: ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ಚಿತ್ರರಂಗದಿಂದ ಸರಿಯಾದ ಸಹಕಾರ ಸಿಗದೇ ಹೋದದ್ದರ ಬಗ್ಗೆ ನೋವು ಮತ್ತು ಸಿಟ್ಟು ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಗುಡುಗಿದ್ದಾರೆ.
ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ.
ಕಲಾವಿದರು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದಿದ್ದಾರೆ.
16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ನನಗೆ ಸಿನಿಮಾರಂಗದವರ ಮೇಲೆ ಕೋಪ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಟರ ಮೇಲೆ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು “ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಅಸೋಸಿಯೇಷನ್ ನಿಂದ ಕೆಲವರು ಮಾತ್ರ ಬಂದಿದ್ದರು. ಕಲಾವಿದರ ಪೈಕಿ, ಸಾಧು ಕೋಕಿಲ ಹಾಗೂ ದುನಿಯಾ ವಿಜಿ ಅವರನ್ನು ಬಿಟ್ಟರೆ ಮತ್ಯಾರು ಭಾಗವಹಿಸಲಿಲ್ಲ. ಕೆಲವರು ನಟರನ್ನು ಬಳಸಿಕೊಂಡು ನಂತರ ಬಿಸಾಡುತ್ತಾರೆ. ನಾವು ಆ ರೀತಿ ಮಾಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಧು ಕೋಕಿಲ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಯಾರು ನಮಗೆ ಸಹಾಯ ಮಾಡುತ್ತಾರೋ ಅವರನ್ನು ಗುರುತಿಸಬೇಕು. ನಮಗೆ ಎಲ್ಲ ರಂಗದಲ್ಲಿಯೂ ಯಾರ್ಯಾರ ನಾಡಿ ಮಿಡಿತ ಏನಿದೆ ಎಂಬುದರ ಅರಿವಿದೆ. ಕಷ್ಟ ಕಾಲದಲ್ಲಿ ಆಗದಿದ್ದ ಮೇಲೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದರು. ಡಿಸಿಎಂ ಹೇಳಿಕೆಗೆ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.