ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಿರುವ ಅಮೆರಿಕದ ಪ್ರಮುಖ ಕಂಪನಿ ಟೆಸ್ಲಾ, ಭಾರತದಲ್ಲಿ ತನ್ನ ಮೊದಲ ಶೋರೂಮ್ ಅನ್ನು ಮುಂಬೈನ ಪ್ರತಿಷ್ಠಿತ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್)ಯಲ್ಲಿ ತೆರೆಯಲು ಸಜ್ಜಾಗಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಟೆಸ್ಲಾ ಮುಂದಾಗಿದೆ.
ಬಿಕೆಸಿಯ ವಾಣಿಜ್ಯ ಸಂಕೀರ್ಣದ ನೆಲ ಮಹಡಿಯಲ್ಲಿ ಸುಮಾರು 4,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಶೋರೂಮ್ ತಲೆ ಎತ್ತಲಿದೆ. ಐದು ವರ್ಷಗಳ ಅವಧಿಗೆ ಈ ಜಾಗವನ್ನು ಬಾಡಿಗೆಗೆ ಪಡೆಯಲಾಗಿದೆ. ಪ್ರತಿ ತಿಂಗಳು ಸುಮಾರು 35 ಲಕ್ಷ ರೂಪಾಯಿಗಳ ಬಾಡಿಗೆಯನ್ನು ಟೆಸ್ಲಾ ಪಾವತಿಸಲಿದೆ.
ಮುಂಬೈನ ಬಳಿಕ ದೆಹಲಿಯಲ್ಲಿಯೂ ಟೆಸ್ಲಾ ತನ್ನ ಎರಡನೇ ಶೋರೂಮ್ ಅನ್ನು ತೆರೆಯುವ ಸಾಧ್ಯತೆಗಳಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಭೇಟಿಯ ನಂತರ ಭಾರತದಲ್ಲಿ 13 ಹುದ್ದೆಗಳಿಗೆ ಟೆಸ್ಲಾ ಅರ್ಜಿಗಳನ್ನು ಆಹ್ವಾನಿಸಿತ್ತು. ಇದರ ಬೆನ್ನಲ್ಲೇ ಇದೀಗ ಮುಂಬೈನಲ್ಲಿ ಶೋರೂಮ್ ತೆರೆಯುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಟೆಸ್ಲಾ ಮುಂದಾಗಿದೆ.
ಈ ಶೋರೂಮ್‌ನಲ್ಲಿ ಟೆಸ್ಲಾ ತನ್ನ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶಿಸಲಿದೆ. ಇದರಿಂದ ಭಾರತದ ಗ್ರಾಹಕರಿಗೆ ಟೆಸ್ಲಾ ಕಾರುಗಳ ಅನುಭವ ಪಡೆಯಲು ಮತ್ತು ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಟೆಸ್ಲಾದ ಈ ನಡೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ.